ನವದೆಹಲಿ,ಮೇ6(DaijiworldNews/AZM): ರಂಜಾನ್ ತಿಂಗಳ ಹಿನ್ನೆಲೆ ಮುಸ್ಲಿಂ ಸಂಘಟನೆಗಳು ಮತದಾನ ಸಮಯ ಬದಲಾಯಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಕೇಂದ್ರ ಚುನಾವಣಾ ಆಯೋಗ ಈ ಮನವಿಯನ್ನು ತಿರಸ್ಕರಿಸಿದೆ.
ರಂಜಾನ್ ಹಿನ್ನೆಲೆಯಲ್ಲಿ ಬೆಳಗ್ಗೆ 4.30 ಅಥವಾ 5ಗಂಟೆಯಿಂದ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಸ್ಲಿಂ ಸಂಘಟನೆಗಳು ಮನವಿ ಮಾಡಿದ್ದವು. ರಂಜಾನ್ ಹಾಗೂ ಬೇಸಿಗೆ ಕಾಲದ ಕಾರಣದಿಂದ2 ಗಂಟೆ ಮೊದಲು ಮತದಾನ ಆರಂಭಿಸಬೇಕು ಎನ್ನುವುದು ಈ ಸಂಘಟನೆಗ ಆಗ್ರಹವಾಗಿತ್ತು. ಈ ಸಂಬಂಧ ಸುಪ್ರೀಂ ಕೋರ್ಟ್ನಲ್ಲೂ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ಪರಿಗಣಿಸಿ ಆದೇಶ ನೀಡುವಂತೆ ಆಯೋಗಕ್ಕೆ ಕೋರ್ಟ್ ಸೂಚಿಸಿತ್ತು.
ಸಂಘಟನೆಗಳ ಮನವಿ ಆಧರಿಸಿ ಆದೇಶ ನೀಡಿರುವ ಆಯೋಗ, ಬೆಳಗ್ಗೆ 5 ಗಂಟೆಯಿಂದಲೇ ಮತದಾನಕ್ಕೆ ವ್ಯವಸ್ಥೆ ಮಾಡುವುದು ಅಸಾಧ್ಯ. ಈ ಕುರಿತು ಸಿದ್ಧತೆ ಮಾಡಲು ಈಗ ಅವಕಾಶವಿಲ್ಲ. ಹೀಗಾಗಿ ಮೇ 6, 12 ಹಾಗೂ 19ರಂದು ಎಂದಿನಂತೆ ಬೆಳಗ್ಗೆ 7ರಿಂದಲೇ ಮತದಾನ ನಡೆಯಲಿದೆ ಎಂದು ಆಯೋಗ ಸ್ಪಷ್ಟಪಡಿಸಿದ್ದು, ಮುಸ್ಲಿಂ ಮತದಾರರು ಮತಗಟ್ಟೆಗೆ ಬಾರದೆ ಇರಲು ಉದ್ದೇಶಪೂರ್ವಕವಾಗಿ ಬಿಜೆಪಿ ಒತ್ತಡಕ್ಕೆ ಮಣಿದು ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಪ.ಬಂಗಾಳದಲ್ಲಿ ಟಿಎಂಸಿ ನಾಯಕರು ಆರೋಪಿಸಿದ್ದಾರೆ.