ಕಲಬುರಗಿ, ಏ.22(DaijiworldNews/AA): ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಕಂಪದ ಮಾತುಗಳನ್ನಾಡುತ್ತಾ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದೆಲ್ಲೆಡೆ ಅಸಮಾಧಾನ ಭುಗಿಲೆದ್ದಿದೆ. ಈ ಪ್ರಕರಣದ ತನಿಖೆ ಸಿಬಿಐನಿಂದ ಮಾಡಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇಹಾ ಕೊಲೆ ಪ್ರಕರಣವನ್ನು ಸಿದ್ದರಾಮಯ್ಯ ಸರ್ಕಾರ ಬಹಳ ಹಗುರವಾಗಿ ಪರಿಗಣಿಸಿದೆ. ಕೆಲ ಸಚಿವರು ನೇಹಾಳ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು ಬಿಟ್ಟರೆ, ಈ ಹೇಯ ಕೃತ್ಯವನ್ನು ಖಂಡಿಸಿಲ್ಲ ಮತ್ತು ಕೊಲೆಗಡುಕನನ್ನು ಗಲ್ಲಿಗೇರಿಸುವ ಶಿಕ್ಷೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಅಂತ ಹೇಳಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಅವರ ಬಿಜೆಪಿಯು ಮುಸ್ಲಿಂ ಸಮುದಾಯಕ್ಕೆ ಕಿರುಕುಳ ನೀಡುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಸಲ್ಮಾನರು ತಮ್ಮ ಸಹೋದರರು ಅಂತ ಅವರು ಘೋಷಣೆಯನ್ನೇ ಮಾಡಿದ್ದಾರೆ. ರಾಮನಗರದಲ್ಲಿ ಮುಸ್ಲಿಂ ಮತಾಂಧನೊಬ್ಬ ರಾಮಮಂದಿರದ ಕುರಿತು ಅವಹೇಳನಕಾರಿಯಾಗಿ ಮಾತಾಡಿದರೂ ಶಿವಕುಮಾರ್ ಅವನ ವಿರುದ್ಧ ಬಾಯಿಬಿಡಲಿಲ್ಲ. ತಾವು ಹಿಂದೂ ವಿರೋಧಿಗಳು ಅಂತ ಅವರು ಯಾವತ್ತೋ ಸಾಬೀತು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.