ಚಿಕ್ಕಮಗಳೂರು, ಏ.22(DaijiworldNews/AK): ವಾಜಪೇಯಿಯವರ ಇಂಡಿಯಾ ಶೈನಿಂಗ್ ಎನ್ನುವ ಸುಳ್ಳು ಪ್ರಚಾರ ಸೋತ ಹಾಗೆಯೇ ಮೋದಿಯವರ ವಿಕಸಿತ ಭಾರತ ಎನ್ನುವ ಸುಳ್ಳಿನ ಪ್ರಚಾರಕ್ಕೂ ಸೋಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಬೃಹತ್ ಪ್ರಜಾಧ್ವನಿ-2 ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.ಹತ್ತತ್ತು ವರ್ಷ ಪ್ರಧಾನಿಯಾಗಿ ಮೋದಿಯವರು ಭಾರತೀಯರಿಗೆ ಸರಣಿ ಸುಳ್ಳುಗಳನ್ನು ನಂಬಿಸಿ ವಂಚಿಸಿದರು.ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕ್ತೀವಿ ಎಂದು ನಂಬಿಸಿದರು. ಈಗ ನಂಬಿಕೆ ದ್ರೋಹ ಆಗಿದೆ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸ್ತೀವಿ ಎಂದು ದೇಶದ ಯುವಕ/ ಯುವತಿಯರನ್ನು ನಂಬಿಸಿದರು. ವಿದ್ಯಾವಂತರು ಡಬ್ಬಲ್ ಡಿಗ್ರಿ ಪಡೆದು ಉದ್ಯೋಗ ಕೊಡಿ ಎಂದರೆ ಹೋಗಿ ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಇಂಥಾ ನಂಬಿಕೆ ದ್ರೋಹಗಳು ಪ್ರಧಾನಿ ಕುರ್ಚಿಗೆ ಘನತೆ ತರುತ್ತದೆಯೇ ಎಂದು ಪ್ರಶ್ನಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ನಂಬಿಸಿ ರೈತರ ಖರ್ಚು ಮೂರು ಪಟ್ಟು ಮಾಡಿದರು. ಇದು ದೇಶದ ಇಡಿ ದೇಶದ ರೈತ ಕುಲಕ್ಕೆ ಬಗೆದ ನಂಬಿಕೆ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದರು.
ಮೋದಿಯವರ ಜತೆ ಪೈಪೋಟಿಗೆ ಬಿದ್ದವರಂತೆ ದೇವೇಗೌಡರು ಹೇಳಿದ ಸುಳ್ಳುಗಳನ್ನು ಕೇಳಿ ನನಗೇ ನಾಚಿಕೆ ಆಯ್ತು. ದೇವೇಗೌಡರು ಮೋದಿಯವರ ಮಟ್ಟಕ್ಕೆ ಇಳಿದು ಸುಳ್ಳು ಹೇಳಿದ್ರಲ್ಲಾ ಅಂತ ನನಗೇ ನಾಚಿಕೆ ಆಯ್ತು.
ಮೋದಿಯವರು ರಾಜ್ಯದ ಜನತೆಗೆ ಕೊಟ್ಟ ಖಾಲಿ ಚೊಂಬನ್ನು ದೇವೇಗೌಡರು ಅಕ್ಷಯ ಪಾತ್ರೆ ಎಂದು ಸುಳ್ಳು ಹೇಳಿದ್ದಾರೆ. ಚೊಂಬು ಅಕ್ಷಯ ಪಾತ್ರೆ ಆಗಿದ್ದರೆ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡಲು ಏಕೆ ಸಾಧ್ಯವಾಗಲಿಲ್ಲ? ರೈತರ ಸಾಲ ಏಕೆ ಮನ್ನಾ ಮಾಡಲಿಲ್ಲ ಎಂದು ಪ್ರಶ್ನಿಸಿದರು.