ಬೆಂಗಳೂರು ಏ. 23(DaijiworldNews/AK):ಕರ್ನಾಟಕದ ಕಾಂಗ್ರೆಸ್ ಸರಕಾರವು ಅಧಿಕಾರ ದುರುಪಯೋಗದ ಪರಮಾವಧಿಗೆ ತಲುಪಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಕ್ಷೇಪಿಸಿದರು.
ನಗರದ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಯಾವ ನೀತಿ ನಿಯಮಗಳಿರಬೇಕು ಎಂಬ ಆದೇಶಗಳನ್ನು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳಿಸಿದ್ದಾರೆ. ಆದೇಶ ಪಾಲಿಸಬೇಕಾದ ಸ್ಥಾನದಲ್ಲಿ ಕುಳಿತ ವ್ಯಕ್ತಿಗಳು ಇವತ್ತು ಕಾಂಗ್ರೆಸ್ ಪಕ್ಷದ ಕೈಗೊಂಬೆಗಳಾಗಿದ್ದಾರೆ. ವಿಧಾನಸೌಧ ಕಾಂಗ್ರೆಸ್ ಕಚೇರಿ ಆಗುತ್ತಿದೆ ಎಂದು ಟೀಕಿಸಿದರು.
ಅವರದೇ ಗೂಂಡಾ ರಾಜ್ಯ ಹೊಂದಿದ ಡಿ.ಕೆ.ಶಿವಕುಮಾರ್ ಅವರು ಮೊನ್ನೆ ವಿಧಾನಸೌಧದಲ್ಲೇ ಕಾಂಗ್ರೆಸ್ ಪಕ್ಷ ಸೇರ್ಪಡೆ ಮಾಡಿದರು. ಮುಖ್ಯ ಕಾರ್ಯದರ್ಶಿಯವರು ನಾವು ದೂರು ಕೊಟ್ಟಾಗ ಇದು ಅಪರಾಧ, ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಏನೂ ಆಗಿಲ್ಲ ಎಂದು ವಿವರಿಸಿದರು.ಇವತ್ತು ಕಾಂಗ್ರೆಸ್ಸಿನವರು ವಿಧಾನಸೌಧದ ಮುಂಭಾಗದಲ್ಲಿ, ಚುನಾವಣೆ ನಡೆಯುವ ಸಂದರ್ಭದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ಅನುಮತಿ ಕೊಟ್ಟ ಮುಖ್ಯ ಕಾರ್ಯದರ್ಶಿ ವಿರುದ್ಧ ಕಾನೂನಿನಡಿ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತಿದೆ ಎಂದರು.
ಚುನಾವಣೆ ನೀತಿ ಸಂಹಿತೆ ಆರಂಭವಾದ ಬಳಿಕ 2-3 ಬಾರಿ ವಿಧಾನಸೌಧದ ದುರ್ಬಳಕೆ ಆಗಿದೆ ಎಂದು ಆರೋಪಿಸಿದರು.ಮುಖ್ಯ ಕಾರ್ಯದರ್ಶಿಯವರು ಕಾನೂನು ಪಾಲಿಸದೆ, ಕಾಂಗ್ರೆಸ್ ಹೇಳಿದ್ದನ್ನು ಮಾಡುತ್ತಿರುವುದನ್ನು ಗಮನಿಸಿ ಇವರ ಮೇಲೆ ಚುನಾವಣಾ ಆಯೋಗ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಅವರು ಆಗ್ರಹಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ, ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಪ್ರಮುಖರು ಈ ಸಂದರ್ಭದಲ್ಲಿ ಹಾಜರಿದ್ದರು.