ನವದೆಹಲಿ, ಏ. 23(DaijiworldNews/AK):ದೆಹಲಿ ಮದ್ಯನೀತಿ ಹಗರಣದಲ್ಲಿ ಬಂಧನವಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಬಿಆರ್ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಮೇ 7ರವರೆಗೆ ವಿಸ್ತರಿಸಿದೆ.
ಇದಕ್ಕೂ ಮುನ್ನ ನ್ಯಾಯಾಲಯವು ಕೇಜ್ರಿವಾಲ್ ಅವರನ್ನು ಏಪ್ರಿಲ್ 1 ರಿಂದ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಇದಾದ ಬಳಿಕ ನ್ಯಾಯಾಲಯ ಮತ್ತೊಮ್ಮೆ ಅವರ ನ್ಯಾಯಾಂಗ ಬಂಧನವನ್ನು ಏಪ್ರಿಲ್ 23ರವರೆಗೆ ವಿಸ್ತರಿಸಿತ್ತು. ಇದೀಗ ಮತ್ತೆ ಮೇ 7ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ.
ಈ ಪ್ರಕರಣದಲ್ಲಿ ಸಿಎಂ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಇಡಿ ಬಂಧಿಸಿತ್ತು. ಬಿಆರ್ಎಸ್ ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನೂ ಕೂಡ ವಿಸ್ತರಿಸಲಾಗಿದೆ.
ಚುನಾವಣೆಯ ಸಮಯದಲ್ಲಿ ರಾಜಕೀಯ ಲಾಭಕ್ಕೋಸ್ಕರ ಬಂಧಿಸಲಾಗಿದೆ ಎನ್ನುವ ಕೇಜ್ರಿವಾಲ್ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕೋರ್ಟ್, ‘ಅರ್ಜಿದಾರರು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.ಚುನಾವಣಾ ಕಾಲವೋ ಇಲ್ಲವೋ ಆದರೆ, ಕಾನೂನು ಪ್ರಕಾರ ಅವರ ಬಂಧನ ಆಗಿದೆ ಎನ್ನುವುದನ್ನು ಮಾತ್ರ ಕೋರ್ಟ್ ಪರಿಗಣಿಸುತ್ತದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಈ ಮೊದಲು ಹೇಳಿತ್ತು.