ನವದೆಹಲಿ,ಮೇ6(DaijiworldNews/AZM):ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಿರುವುದನ್ನು ಚುನಾವಣಾ ಆಯುಕ್ತ ಅಶೋಕ್ ಲವಾಸ ವಿರೋಧಿಸಿದ್ದಾರೆ.
ಈ ಸಂಬಂಧ ನಾಲ್ಕು ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಒಂದು ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ವಿರುದ್ಧ ದೂರು ದಾಖಲಾಗಿತ್ತು.
ಗುಜರಾತ್ನ ಪಠಾಣ್ನಲ್ಲಿ ಮೋದಿ ಅವರು ಏಪ್ರಿಲ್ 21ರಂದು ಮಾಡಿದ್ದ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಮೋದಿ ಅವರಿಗೆ ಚುನಾವಣಾ ಆಯೋಗ ಶನಿವಾರ ಕ್ಲೀನ್ಚಿಟ್ ನೀಡಿದೆ. 'ಬಾಲಾಕೋಟ್ ದಾಳಿಯಲ್ಲಿ ಪಾಕಿಸ್ತಾನಕ್ಕೆ ಸೆರೆಸಿಕ್ಕಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಭಾರತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು' ಎಂದು ಮೋದಿ ಭಾಷಣದಲ್ಲಿ ಹೇಳಿದ್ದರು.
ಮಾಹಾರಾಷ್ಟ್ರದ ವಾರ್ಧಾರದಲ್ಲಿ ಏಪ್ರಿಲ್ 1ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇರಳದ ವಯನಾಡ್ನಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದನ್ನು ಧರ್ಮದ ಆಧಾರದಲ್ಲಿ ಪ್ರಶ್ನಿಸಿದ್ದರು. 'ಹಿಂದೂಗಳು ಜಾಸ್ತಿ ಇರುವ ಪ್ರದೇಶದಲ್ಲಿ ಕಣಕ್ಕಿಳಿಯಲು ಕಾಂಗ್ರೆಸ್ಗೆ ಭಯ' ಎಂದು ಟೀಕಿಸಿದ್ದರು. ಏಪ್ರಿಲ್ 6ರಂದು ನಾಂದೇಡ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಬಾಲಾಕೋಟ್ ದಾಳಿ ವಿಚಾರ ಪ್ರಸ್ತಾಪಿಸಿ ಮೊದಲ ಬಾರಿ ಮತದಾನ ಮಾಡುವವರ ಮೇಲೆ ಪ್ರಭಾವ ಬೀರಿದ ಆರೋಪಕ್ಕೆ ಗುರಿಯಾಗಿದ್ದರು. ಏಪ್ರಿಲ್ 9ರಂದು ಲಾತೂರ್ನಲ್ಲಿ ಮಾಡಿದ ಭಾಷಣದ ವಿರುದ್ಧವೂ ದೂರು ದಾಖಲಾಗಿತ್ತು. ಏಪ್ರಿಲ್ 9ರಂದು ನಾಗ್ಪುರದಲ್ಲಿ ಮಾತನಾಡಿದ್ದ ಅಮಿತ್ ಶಾ, ವಯನಾಡ್ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಹೋಲಿಸಿದ್ದರು. ರಾಹುಲ್ ಗಾಂಧಿಯ ಚುನಾವಣಾ ಪ್ರಚಾರ ರ್ಯಾಲಿಯ ಸಂದರ್ಭದಲ್ಲಿ ಹಸಿರು ಬಣ್ಣದ ಬಾವುಟಗಳನ್ನು ಬಳಸಿದ್ದಕ್ಕಾಗಿ ಶಾ ಈ ಹೋಲಿಕೆ ಮಾಡಿದ್ದರು.
ಈ ಐದು ಪ್ರಕರಣಗಳಲ್ಲಿ ಕ್ಲೀನ್ಚಿಟ್ ನೀಡುವುದಕ್ಕೆ ಲವಾಸ ವಿರೋಧ ವ್ಯಕ್ತಪಡಿಸಿದ್ದರು ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.