ಬೆಂಗಳೂರು, ಏ. 24(DaijiworldNews/AK):ಇಡೀ ದೇಶದ ಉದ್ದಗಲದಲ್ಲಿ ಇವತ್ತು ನರೇಂದ್ರ ಮೋದಿಯವರ ಪರ ಅಲೆಯಿದೆ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು
ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಬಿಜೆಪಿ ಸಿದ್ಧಾಂತವನ್ನು ಒಪ್ಪಿ, ಜನಪ್ರಿಯ ವೈದ್ಯ ಡಾ.ಸುಶ್ರುತ್ ಮೈಸೂರು ಅವರು ಬಿಜೆಪಿ ಸೇರಿದ್ದಾರೆ. ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಮೈಸೂರಿನಲ್ಲಿ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು; ಭಾರತ್ ಜೋಡೊ ಯಾತ್ರೆಯಲ್ಲೂ ಸಕ್ರಿಯರಾಗಿದ್ದರು ಎಂದರು.ಡಾ.ಸುಶ್ರುತ್ ಅವರನ್ನು ಮೈಸೂರು ಭಾಗದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ ಎಂದು ನುಡಿದರು.
ಲೋಕಸಭಾ ಚುನಾವಣೆ ಕರ್ನಾಟಕ ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಮಾತನಾಡಿ, ಡಾ. ಸುಶ್ರುತ್ ಅವರು ಪ್ರಸಿದ್ಧ ವೈದ್ಯರು. ಯಾವುದೇ ಸ್ವಾರ್ಥ, ಲಾಭದ ದೃಷ್ಟಿಕೋನ ಇಲ್ಲದೆ ಅವರು ಬಿಜೆಪಿ ಸೇರಿದ್ದು ಸ್ವಾಗತಾರ್ಹ ಎಂದು ತಿಳಿಸಿದರು.
ಡಾ. ಸುಶ್ರುತ್ ಗೌಡ ಅವರು ಮಾತನಾಡಿ, ಸುಮಾರು ಐದೂವರೆ ತಿಂಗಳ ಕಾಲ ಭಾರತ್ ಜೋಡೊದಲ್ಲಿ ತೊಡಗಿಸಿಕೊಂಡಿದ್ದೆ ಎಂದರು. ಕೆಪಿಸಿಸಿ ಸೇರಿದ ಮೇಲೆ ನನ್ನ ದೂರದೃಷ್ಟಿ ಈಡೇರಿಸಲು ಅಸಾಧ್ಯ ಅನಿಸಿತು. ಮೋದಿಯವರ ದೂರದೃಷ್ಟಿ ಗಮನಿಸಿದ ಬಳಿಕ ಬಿಜೆಪಿ ಸೇರಲು ಯೋಚಿಸಿದೆ ಎಂದರು.
ಒಡೆಯರ್ ಅವರಿಗೆ ಮತದಾನ ಮಾಡಿ ಚುನಾಯಿಸಿ; ಇದರಿಂದ ಮೈಸೂರು, ಕೊಡಗು ಮತ್ತು ದೇಶಕ್ಕೆ ಒಳ್ಳೆಯದಾಗಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ರಾಜ್ಯ ವಕ್ತಾರ ಮಹೇಶ್ ಎಂ.ಜಿ, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಪ್ರಮುಖರು ಭಾಗವಹಿಸಿದ್ದರು.