ನವದೆಹಲಿ,ಮೇ06(DaijiworldNews/AZM): ಲೋಕಸಭಾ ಚುನಾವಣೆಗೆ 5ನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಗೃಹ ಸಚಿವ ರಾಜ್ ನಾಥ್ ಸಿಂಗ್ ಹಾಗೂ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಯವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಒಟ್ಟು 7 ರಾಜ್ಯಗಳ 51 ಕ್ಷೇತ್ರದಲ್ಲಿ ಮತದಾರರು ಹಕ್ಕು ಚಲಾಯಿಸುತ್ತಿದ್ದು,ಲಖನೌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಬೆಳಗ್ಗೆಯೇ ಸ್ಕಾಲರ್ಸ್ ಹೋಮ್ ಹೈಸ್ಕೂಲ್ನ ಮತಗಟ್ಟೆ ಸಂಖ್ಯೆ 333ಕ್ಕೆ ತೆರಳಿ ಮತ ಚಲಾಯಿಸಿದರು ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಲಖನೌದ ಸಿಟಿ ಮಾಂಟೆಸ್ಸರಿ ಇಂಟರ್ ಸ್ಕೂಲ್ನ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಇನ್ನು ಸಚಿವರಾದ ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಪತ್ನಿ ಗಾಯತ್ರಿ ರಾಥೋಡ್ ಜೈಪುರ್ನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ. 5ನೇ ಹಂತದ ಚುನಾವಣಾ ಕಣದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸ್ಮೃತಿ ಇರಾನಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಸೇರಿದಂತೆ ಒಟ್ಟು 674 ಅಭ್ಯರ್ಥಿಗಳು ಇದ್ದಾರೆ.
ಉತ್ತರ ಪ್ರದೇಶದ 14, ರಾಜಸ್ಥಾನದ 12, ಪಶ್ಚಿಮ ಬಂಗಾಳ ಹಾಗೂ ಮಧ್ಯಪ್ರದೇಶದಲ್ಲಿ ತಲಾ 7 ಕ್ಷೇತ್ರಗಳು, ಬಿಹಾರ 5, ಝಾರ್ಖಂಡ್ 4 ಹಾಗೂ ಜಮ್ಮು ಕಾಶ್ಮೀರದ 2 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.