ಕಲಬುರ್ಗಿ, ಏ 25 (DaijiworldNews/MS): ನೀವು ಕಾಂಗ್ರೆಸ್ ಗೆ ವೋಟ್ ಹಾಕಲು ಬರದೇ ಇದ್ದರೂ ಪರವಾಗಿಲ್ಲ. ನಾನು ಸತ್ತ ಮೇಲೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಬುಧವಾರ ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಜಿಲ್ಲೆಯ ಅಫಜಲಪುರದಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಿಮ್ಮ ಮತವನ್ನು ತಪ್ಪಿಸಿಕೊಂಡರೆ (ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕದಿದ್ದರೆ) ನನಗೆ ಇಲ್ಲಿ ಸ್ಥಾನವಿಲ್ಲ ಎಂದು ಭಾವಿಸುತ್ತೇನೆ ಮತ್ತು ನಿಮ್ಮ ಹೃದಯವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾವಿಸುತ್ತೇನೆ ಎಂದು ಖರ್ಗೆ ಹೇಳಿದ್ದಾರೆ. ಅವರು ಇಲ್ಲಿ 2009 ಮತ್ತು 2014 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಅವರು 2019 ರಲ್ಲಿ ಸೋತಿದ್ದರು.
ಕಾಂಗ್ರೆಸ್ಸಿಗೆ ಮತ ಹಾಕುತ್ತೀರೋ ಇಲ್ಲವೋ, ಕಲಬುರಗಿಗಾಗಿ ಕೆಲಸ ಮಾಡಿದ್ದೇನೆ ಎಂದು ಭಾವಿಸಿದರೆ, ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಸತ್ತಾಗ ಸುಟ್ಟರೇ ಮೇಣದ ಬತ್ತಿ ಹಚ್ಚಲು ಬನ್ನಿ, ಹೂಳಿದ್ರೆ ಒಂದು ಹಿಡಿ ಮಣ್ಣು ಹಾಕಲು ಬನ್ನಿ. ಆಗ ಜನರು ನೋಡಪ್ಪ ಆತನ ಅಂತ್ಯಕ್ರಿಯೆಗೆ ಎಷ್ಟು ಜನ ಬಂದರೂ ಅಂತ ಹೇಳಬೇಕು ಎಂದು ಭಾವುಕರಾದ್ದಾರೆ
ʻಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತವನ್ನು ಸೋಲಿಸಲು ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ನಾನು ರಾಜಕೀಯಕ್ಕಾಗಿ ಹುಟ್ಟಿದ್ದೇನೆ. ಚುನಾವಣೆಗೆ ಸ್ಪರ್ಧಿಸಲಿ ಅಥವಾ ಇಲ್ಲದಿರಲಿ, ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ನನ್ನ ಕೊನೆಯ ಉಸಿರು ಇರುವವರೆಗೂ ಶ್ರಮಿಸುತ್ತೇನೆ. ರಾಜಕೀಯದಿಂದ ನಿವೃತ್ತಿಯಾಗುವುದಿಲ್ಲ,ʼ ಎಂದು ಖರ್ಗೆ ಹೇಳಿದ್ದಾರೆ