ಬೆಂಗಳೂರು, ಏ 25 (DaijiworldNews/MS): ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಇಂದಿನಿಂದ ಮುಂದಿನ 5 ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಹೀಟ್ ವೇವ್ ಅಥವಾ ಬಿಸಿಗಾಳಿ ಎಚ್ಚರಿಕೆ ನೀಡಿದೆ. ಕರ್ನಾಟಕ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಭಾರತದ ಹೆಚ್ಚಿನ ಭಾಗಗಳಲ್ಲಿ ಉಷ್ಣ ಅಲೆಯ ಪರಿಸ್ಥಿತಿಗಳೊಂದಿಗೆ ಬಿಸಿ ಮತ್ತು ಆರ್ದ್ರ ವಾತಾವರಣದ ಮುನ್ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಸೂಚಿಸಿದೆ.
ಏಪ್ರಿಲ್ 24 ರಿಂದ 28 ರವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಗಾಳಿ ಮತ್ತು ಆರ್ದ್ರ ವಾತಾವರಣ ಇರುತ್ತದೆ. ಹವಾಮಾನ ಇಲಾಖೆಯು ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ. ಒಟ್ಟಾರೆಯಾಗಿ, ಮುಂದಿನ ಐದು ದಿನಗಳಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ.
ಸುಡುವ ಸೂರ್ಯನಿಗೆ ದೀರ್ಘಕಾಲ ತೆರೆದುಕೊಳ್ಳುವವರಲ್ಲಿ ಶಾಖ-ಸಂಬಂಧಿತ ಅನಾರೋಗ್ಯದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಆರೋಗ್ಯ ಕಾಳಜಿ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ.ಹೈಬಿಪಿ, ಹೃದಯ ಸಂಬಂಧಿ ಖಾಯಿಲೆ ಇರುವವರು, ಗರ್ಭಿಣಿಯರು, ವೃದ್ಧರು ಮತ್ತು ಮಕ್ಕಳು ರಣ ಬಿಸಿಲಿಗೆ ಮೈ ಒಡ್ಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ದೇಹದ ಉಷ್ಣತೆ 40 ಡಿಗ್ರಿ ಸೆಲ್ಸಿಯಸ್ ಮೀರಿದರೆ ಅತ್ಯಂತ ಗಂಭೀರ ಸಮಸ್ಯೆ ಎದುರಾಗುವ ಸಂಭವ ಇದೆ. ಹೀಟ್ ಸ್ಟೋಕ್ ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.