ಭೋಪಾಲ್, ಏ 25 (DaijiworldNews/ AK): ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇತರೇ ಹಿಂದುಳಿದ ವರ್ಗದ ಅಡಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿದ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಮಧ್ಯಪ್ರದೇಶದ ಮೊರೇನಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾತ್ರೋರಾತ್ರಿ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಎಲ್ಲ ವರ್ಗವನ್ನು ಒಬಿಸಿಗೆ ಸೇರಿಸಿ ಆದೇಶ ಹೊರಡಿಸಿದೆ.ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾನ್ಯತೆ ನೀಡಿವ ಮೂಲಕ ಒಬಿಸಿ ಜನರ ಅವಕಾಶಗಳನ್ನು ಕಳ್ಳತನದಿಂದ ಕಿತ್ತುಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂವಿಧಾನ ಮತ್ತು ಕಾನೂನು ವಿರುದ್ಧವಾಗಿ ಒಬಿಸಿ ಮೀಸಲಾತಿಯನ್ನು ನೀಡಲಾಗಿದೆ. ಒಬಿಸಿ ಸಮುದಾಯಕ್ಕೆ ಸಿಗುವ ಲಾಭವನ್ನು ಲೂಟಿ ಮಾಡಿ ಅವರಿಗೆ ನೀಡಲಾಗಿದೆ ಎಂದು ಕಿಡಿಕಾರಿದರು.
ಸಂವಿಧಾನ ರಚಿಸುವ ವೇಳೆ ತಿಂಗಳುಗಳ ಕಾಲ ಚರ್ಚೆ ನಡೆಸಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಕಾಂಗ್ರೆಸ್ ಮೋಸ ಮಾಡಿ ಹಿಂಬಾಗಿಲಿನಿಂದ ಧರ್ಮ ಆಧಾರಿತ ಮೀಸಲಾತಿ ನೀಡಿದೆ. ವೋಟು ಬ್ಯಾಂಕ್, ತುಷ್ಟೀಕರಣ ಮುಳುಗಿರುವ ಕಾಂಗ್ರೆಸ್ ಕರ್ನಾಟಕದ ಇದೇ ಮಾದರಿಯನ್ನು ಇಡೀ ದೇಶದಲ್ಲಿ ಅನುಷ್ಠಾನಕ್ಕೆ ತರಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.