ದೊಡ್ಡಬಳ್ಳಾಪುರ,ಮೇ 6(DaijiworldNews/AZM):ಪ್ರೀತಿಸಿ ಮದುವೆಯಾದ ಬಳಿಕವೂ ಮನೆಯವರ ಹಿಂಸೆ ಸಹಿಸಲಾಗುತ್ತಿಲ್ಲ ಎಂದು ಆರೋಪಿಸಿ ಇಬ್ಬರು ಪ್ರೇಮಿಗಳು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ನಗರದ ಕಚೇರಿ ಪಾಳ್ಯದ ವೆಂಕಟರಾಜು ಎಂಬುವರ ಪುತ್ರ ವಿಜಯ್ (20) ಹಾಗೂ ಶಾಂತಿನಗರದ ನಿವಾಸಿ ಲೀಲಾವತಿ (18) ಎಂದು ಗುರುತಿಸಲಾಗಿದೆ.
ಇಬ್ಬರು ವಿದ್ಯಾಭ್ಯಾಸ ಮಾಡುತ್ತಿದ್ದು, ಕಾಲೇಜು ದಿನಗಳಲ್ಲೇ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ತಮ್ಮ ಪ್ರೀತಿಗೆ ಮನೆಯವರು ಒಪ್ಪಿಗೆ ನೀಡುದಿಲ್ಲ ಎಂದರಿ ಈ ಪ್ರೇಮಿಗಳು, ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ.ಈ ವಿಷಯ ತಿಳಿದ ಯುವತಿ ಪೋಷಕರು ದೊಡ್ಡಬಳ್ಳಾಪುರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಯುವಕ -ಯುವತಿಯರನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ ರಾಜಿ ಪಂಚಾಯ್ತಿ ನಡೆಸಿ ಕಳುಹಿಸಿದ್ದರು.
ವಿಜಯ್ ಭಾನುವಾರ ತನ್ನ ಮನೆಗೆ ಲೀಲಾವತಿ ಜೊತೆ ಹೋದಾಗ ಈತನ ಪೋಷಕರು ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನ ನೊಂದ ಪ್ರೇಮಿಗಳು ಬೈಕ್ನಲ್ಲಿ ಬಂದು ದೊಡ್ಡಬಳ್ಳಾಪುರದ ವೀರಾಪುರ ಬಳಿ ರೈಲ್ವೆ ಹಳಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಇಬ್ಬರೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಧಿಸಿದಂತೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ.