ಒಡಿಸ್ಸಾ, ಮೇ 06 (Daijiworld News/MSP): ಒಡಿಸ್ಸಾದಲ್ಲಿ ರುದ್ರತಾಂಡವ ನಡೆಸಿ ೩೪ ಜನರನ್ನು ಬಲಿ ಪಡೆದ ಪೋನಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಡೆಸಿದ್ದು ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಒಡಿಸ್ಸಾದ ಬಿಜು ಪಟ್ನಾಯಿಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಪ್ರಧಾನಿ ಮೋದಿ ಬಳಿಕ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ವಿಮಾನ ನಿಲ್ದಾಣದಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾನಿಗೀಡಾದ ಪ್ರದೇಶಗಳ ಪುನರ್ವಸತಿ ಕಾರ್ಯದ ಕುರಿತು ಚರ್ಚೆ ನಡೆಸಿದರು.
ಆ ಬಳಿಕ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ, ಫೋನಿ ಚಂಡಮಾರುತದಿಂದ ಸಂತ್ರಸ್ತರಾಗಿರುವ ಪುನರ್ವಸತಿ ಸೇರಿದಂತೆ ಹಾನಿಗೀಡಾದ ದೂರಸಂಪರ್ಕ ವ್ಯವಸ್ಥೆ ಹಾಗೂ ಮೂಲ ಸೌಕರ್ಯವನ್ನು ಪುನರ್ ಸ್ಥಾಪಿಸುವಂತೆ ಸೂಚಿಸಿದರು. ಇದೇ ಸಂದರ್ಭದಲ್ಲಿ, ಪರಿಹಾರ ಕಾರ್ಯಗಳು, ಪುನರ್ವಸತಿ ಹಾಗೂ ಇನ್ನಿತರ ಕಾರ್ಯಗಳಿಗೆ ಕೇಂದ್ರದಿಂದ ಸಿಗಬೇಕಾದ ಎಲ್ಲಾ ರೀತಿಯ ನೆರವನ್ನು ನೀಡುವುದಾಗಿ ಮೋದಿ ಆಶ್ವಾಸನೆ ನೀಡಿದರು.
ಇನ್ನು ಪೋನಿ ಚಂಡಮಾರುತದ ಆರ್ಭಟಕ್ಕೆ ಒಡಿಸ್ಸಾದ ನೊವಾಖಲಿ, ಭೋಲಾ ಮತ್ತು ಲಕ್ಷ್ಮಿಪುರ್ ಸೇರಿದಂತೆ 8 ಜಿಲ್ಲೆಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಅಧಿಕ ಸಾವು ನೋವುಗಳೂ ಸಹ ಇದೇ ಜಿಲ್ಲೆಗಳಿಂದ ವರದಿಯಾಗಿದ್ದು ಕಾಣೆಯಾದವರ ಮತ್ತು ಸಂಕಷ್ಟದಲ್ಲಿ ಸಿಲುಕಿದವರ ಶೋಧ ಹಾಗೂ ರಕ್ಷಣೆಗಾಗಿ ಕೋಸ್ಟ್ ಗಾರ್ಡ್ನಿಂದ ವಿಶೇಷ ಹಡಗು ಮತ್ತು ಹೆಲಿಕಾಪ್ಟರ್ಗಳ ನಿಯೋಜನೆ ಮಾಡಲಾಗಿದೆ
ಒಡಿಸ್ಸಾ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡರು, ತೀರ ಪ್ರದೇಶದ 16 ಲಕ್ಷ ಜನರನ್ನು 4,000 ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದರೂ ಪ್ರಾಣಹಾನಿ ತಪ್ಪಿಸಲು ಸಾಧ್ಯವಾಗಲಿಲ್ಲ. ಇನ್ನೊಂದೆಡೆ ತೀರ ಪ್ರದೇಶದ ಹಲವು ಹಳ್ಳಿಗಳು ಭಾರಿ ಮಳೆಯಿಂದಾಗಿ ಜಲಾವೃತಗೊಂಡಿವೆ.