ಬೆಂಗಳೂರು, ಏ.27(DaijiworldNews/AA): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದೇವೆ. ಆದರೆ ಯಾವುದೇ ಅಧಿಕೃತ ದೃಢೀಕರಣವಾಗಿಲ್ಲ. ನಾವು ಅಧಿಕೃತ ಆದೇಶದ ನೀರಿಕ್ಷೇಯಲ್ಲಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು 18,000 ಕೋಟಿಗೆ ಮನವಿ ಸಲ್ಲಿಸಿದ್ದೆವು. ಸಮಸ್ಯೆ ಗಂಭೀರವಾಗಿರುವ ಆಧಾರದ ಮೇಲೆ ಪರಿಹಾರ ಕೇಳಿದ್ದೆವು. ಈಗ 3,400 ಕೋಟಿಯಷ್ಟು ಹಣ ಕೊಟ್ಟಿದ್ದಾರೆ. ಅಲ್ಪ ಪ್ರಮಾಣದ ಹಣ ಕೊಟ್ಟು ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಕೇಂದ್ರದ ಬಳಿ ಸಮಯವಿದ್ದಾಗ ರಾಜ್ಯಕ್ಕೆ ಪರ ಪರಿಹಾರ ಬಿಡುಗಡೆ ಅವಕಾಶ ತೆಗೆದುಕೊಂಡಿಲ್ಲ. 4 ತಿಂಗಳು ನಾವು ನೀಡಿದ ಪತ್ರದ ಮೇಲೆ ಕೂತಿದ್ದರು. ಕರ್ನಾಟಕದ ಹಕ್ಕಿಗೆ ಯಾವುದೇ ಬೆಲೆಯನ್ನೂ ಕೊಡಲಿಲ್ಲ. ಅವರ ಕೈಯಲ್ಲಿ ತೀರ್ಮಾನವಿದ್ದಾಗ ರಾಜ್ಯಕ್ಕೆ ಕೊಡಬಾರದು ಅನ್ನೋ ಧೋರಣೆ ಹೊಂದಿದ್ದರು ಎಂದು ತಿಳಿಸಿದರು.