ಚಿಕ್ಕಮಗಳೂರು, ಏ.27(DaijiworldNews/AA): ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲ. ಅವರು ಮಾತಾಡುವುದನ್ನು ಕೇಳುತ್ತಿದ್ದರೆ ಜನ ನೀಡಿರುವ ಬಿರುದು ಸಮಂಜಸವಾಗಿದೆ ಎಂದೆನಿಸುತ್ತದೆ. ನಮಗೆ ವಿಷಯಗಳ ಬಗ್ಗೆ ಸ್ಪಷ್ಟತೆ ಇಲ್ಲದಾಗ ಅರ್ಥಹೀನ ಮಾತುಗಳ ಬರುತ್ತವೆ ಎಂದು ಹಿರಿಯ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ತಮ್ಮ ಪಕ್ಷ ಕೇವಲ 3 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ಅಲ್ಲಿನ ಸಿಎಂಗಳ ಹೆಸರುಗಳು ತಿಳಿದಿಲ್ಲ. ಪಕ್ಷದ ಅಧ್ಯಕ್ಷನನ್ನು ಸಿಎಂ ಎಂದೂ ಮತ್ತು ಸಿಎಂ ಅನ್ನು ಪಕ್ಷದ ಅಧ್ಯಕ್ಷ ಎಂದೂ ಕರೆಯುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಡುವ ಪ್ರತಿ ಮಾತಿನಲ್ಲಿ ಸ್ಪಷ್ಟತೆ ಇದೆ. ಅವರು ನುಡಿದಂತೆ ನಡೆದಿದ್ದಾರೆ ಮತ್ತು ನಡೆದಂತೆ ನುಡಿದಿದ್ದಾರೆ. ಕಾಂಗ್ರೆಸ್ ನೇತೃತ್ವದ ಇಂಡಿಯ ಒಕ್ಕೂಟದಲ್ಲಿ ಪ್ರಧಾನಿಯಾಗುವ ಸಾಮರ್ಥ್ಯ ಯಾರಿಗೂ ಇಲ್ಲ. ಅಸಲಿಗೆ ಪ್ರಧಾನಿ ಅಭ್ಯರ್ಥಿಯ ಬಗ್ಗೆ ಅವರಲ್ಲಿ ಐಕ್ಯಮತವಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿರೋಧಿಸಿದ್ದಾರೆ ಎಂದರು.