ಬೆಂಗಳೂರು, ಏ.27(DaijiworldNews/AA): ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇಂದು ಬರ ಪರಿಹಾರ ಘೋಷಣೆ ಮಾಡಿತ್ತು. ಈ ಹಿನ್ನೆಲೆ ಪ್ರಧಾನಿ ಮೋದಿಗೆ ಧನ್ಯವಾದ ಹೇಳಿ ರಾಜ್ಯ ಬಿಜೆಪಿ ಘಟಕ ಪೋಸ್ಟ್ ಮಾಡಿರುವುದಕ್ಕೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುಪ್ರೀಂ ಕೋರ್ಟ್ನ ಸಕಾಲಿಕ ಮಧ್ಯಸ್ಥಿಕೆ ಬಳಿಕವೇ ಬರ ಪರಿಹಾರ ಬಿಡುಗಡೆಯಾಗಿದೆಯೇ ವಿನಃ ಪ್ರಧಾನಿ ಮೋದಿ ಅವರಿಂದಲ್ಲ. ನಿಜವಾಗಿ ಧನ್ಯವಾದ ತಿಳಿಸಬೇಕಾದದ್ದು ಸುಪ್ರೀಂ ಕೋರ್ಟ್ ಗೆ' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬರ ಉಂಟಾದರೂ, ರೈತರಿಗೆ ಬಿಡಿಗಾಸಿನಷ್ಟೂ ಮಧ್ಯಂತರ ಪರಿಹಾರ ನೀಡದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಓಲೈಕೆ ರಾಜಕಾರಣದಲ್ಲಿ ನಿರತವಾಗಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿಯೂ ಕನ್ನಡಿಗರ ಸಂಕಷ್ಟಕ್ಕೆ ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ₹3,454 ಕೋಟಿ ಬರ ಪರಿಹಾರ ನೀಡುವ ಮೂಲಕ ಸಮಸ್ತ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಿದ್ದಾರೆ. ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಪ್ರಧಾನಿ ಅವರಿಗೆ ತುಂಬು ಹೃದಯದ ಧನ್ಯವಾದಗಳು' ಎಂದು ಬಿಜೆಪಿ ಪೋಸ್ಟ್ ಮಾಡಿತ್ತು.