ಅಮೇಥಿ, ಮೇ 06 (Daijiworld News/MSP): ಪ್ರತಿಷ್ಟೆಯ ಕ್ಷೇತ್ರವಾಗಿರುವ ಅಮೇಥಿಯಲ್ಲಿ ಮೇ 6ರ ಸೋಮವಾರ ಮತದಾನ ನಡೆಯುತ್ತಿದ್ದು, ರಾಜಕೀಯ ಘಟಾನುಘಟಿಗಳಾದ ರಾಹುಲ್ ಗಾಂಧಿ ಹಾಗೂ ಸ್ಮೃತಿ ಇರಾನಿ ಕಣದಲ್ಲಿದ್ದಾರೆ.
ಈ ನಡುವೆ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ವಿರುದ್ದ ಟೀಕೆ ಮಾಡಿದ್ದು. " ರಾಹುಲ್ ಗಾಂಧಿಗೆ ಮಾಡು ಇಲ್ಲವೆ ಮಡಿ ಚುನಾವಣೆ ಎಂದಿದ್ದಾರೆ. ಅಮೇಥಿಯ ಜನರು ರಾಹುಲ್ ಗಾಂಧಿಗೆ ಚಾಲೆಂಜ್ ಹಾಕಿದ್ದಾರೆ. ಅಮೇಥಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಜನರಿಗೆ ಶೌಚಾಲಯ ಇಲ್ಲ," ಎಂದು ಕಿಡಿಕಾರಿದ್ದಾರೆ.
ವಿಶೇಷ ಎಂದರೆ, ಕಳೆದ ಬಾರಿ ಸೋಲುಂಡು ಅಮೇಥಿಯ ಸಂಸದೆ ಆಗಿಲ್ಲದಿದ್ದರೂ, ಸ್ಮೃತಿ ಇರಾನಿ ತಾವು ಸ್ಪರ್ಧಿಸಿದ ಕ್ಷೇತ್ರವನ್ನು ಮರೆತಿರಲಿಲ್ಲ. ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ ಸ್ಮೃತಿ ಇರಾನಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳಿಗೆ ಅನುದಾನವನ್ನು ಕ್ಷೇತ್ರಕ್ಕೆ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆ, ರಸ್ತೆ ,ಹೀಗೆ ಮೂಲಸೌಕರ್ಯ ಮಾತ್ರವಲ್ಲದೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅಮೇಥಿಯ ಜನರಿಂದ ಸ್ಮೃತಿ ದೀದಿ ಎಂದು ಕರೆಯಿಸಿಕೊಂಡಿದ್ದಾರೆ.
೨014 ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಸೋಲು ಲಭಿಸಿದ್ದರು, ನಿರಂತರವಾಗಿ ಕ್ಷೇತ್ರದ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಕೆಲಸಮಾಡಿದ್ದ ಸ್ಮೃತಿ ದೀದಿ ಕಾಂಗ್ರೆಸ್ ನ ಭದ್ರಕೋಟೆ ಎಂಬ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರನ್ನೇ ಸೋಲಿಸಿ ಗೆಲುವಿನ ನಗೆ ಬೀರುತ್ತಾರಾ ಎನ್ನುವುದು ಮೇ 23 ರಂದು ತಿಳಿಯಲಿದೆ.