ಬೆಂಗಳೂರು, ಏ.29(DaijiworldNews/AA): ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಂತಾಪ ಸೂಚಿಸಿರುವ ಪ್ರಧಾನಿ ಚಾಮರಾಜನಗರದ ಹಿರಿಯ ನಾಯಕ ಹಾಗೂ ಸಂಸದರಾದ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು ಹಿಂದುಳಿದವರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ತಮ್ಮ ಸಮಾಜ ಸೇವೆಗಳಿಂದಲೇ ಬಹಳ ಜನಪ್ರಿಯರಾಗಿದ್ದರು. ಅವರ ಅಗಲಿಕೆಯ ನೋವನ್ನು ಕುಟುಂಬ ವರ್ಗದವರಿಗೆ ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಮಾಜಿ ಕೇಂದ್ರ ಸಚಿವರು ಹಾಗೂ ಚಾಮರಾಜನಗರದ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀನಿವಾಸ್ ಪ್ರಸಾದ್ ಅವರು ನಿಧನರಾದ ವಾರ್ತೆ ಕೇಳಿ ಬಹಳ ದುಃಖವಾಗಿದೆ. ಅವರ ಅಗಲಿಕೆ ರಾಜಕೀಯಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆ ಭರಿಸುವ ಶಕ್ತಿಯನ್ನು ಕುಟುಂಬವರಿಗೆ ಮತ್ತು ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.