ರಾಜಸ್ಥಾನ, ಏ.29(DaijiworldNews/AA): ಒಮ್ಮೊಮ್ಮೆ ನಮ್ಮ ಕನಸನ್ನು ನನಸಾಗಿಸಿಕೊಳ್ಳಲು ನಾವು ಆಯ್ಕೆ ಮಾಡಿಕೊಂಡ ಹಾದಿಯನ್ನು ತ್ಯಜಿಸಬೇಕಾಗುತ್ತದೆ. ಈ ರೀತಿ ತಾನು ಆಯ್ಕೆ ಮಾಡಿಕೊಂಡಿದ್ದ ವೈದ್ಯಕೀಯ ಕ್ಷೇತ್ರವನ್ನು ತೊರೆದು ಯುಪಿಎಸ್ ಸಿ ಪರೀಕ್ಷೆ ಬರೆಯುವ ಮೂಲಕ ಐಎ ಎಸ್ ಅಧಿಕಾರಿಯಾದ ಮುದಿತಾ ಶರ್ಮಾ ಅವರ ಯಶೋಗಾಥೆ ಇದು.
ಮುದಿತಾ ಶರ್ಮಾ ಅವರು ಮೂಲತಃ ರಾಜಸ್ಥಾನದ ಮೆರ್ಟಾ ಎಂಬ ಸಣ್ಣ ಪಟ್ಟಣದವರು. ಆಕೆಯ ತಂದೆ ಭಗವತಿ ಲಾಲ್ ಶರ್ಮಾ. ಅವರು ಮೆರ್ಟಾದ ಸರ್ಕಾರಿ ಶಾಲೆಯ ಪ್ರಾಂಶುಪಾಲರು. ಇನ್ನು ತಾಯಿ ಗೃಹಿಣಿಯಾಗಿದ್ದು, ಅವರು ಕೂಡ ಬಿಎಡ್ ಪದವಿಯನ್ನು ಪಡೆದಿರುತ್ತಾರೆ.
ಮುದಿತಾ ಅವರ ಕುಟುಂಬ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿತ್ತು. ಆದ್ದರಿಂದ ಬಾಲ್ಯದಿಂದಲೂ ಮುದಿತಾ ಅವರು ಶಿಕ್ಷಣದಲ್ಲಿ ಉತ್ತಮರಾಗಿದ್ದರು. ಅವರು 10 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 15 ನೇ ರ್ಯಾಂಕ್ ಕೂಡ ಗಳಿಸಿದ್ದರು. ಮುದಿತಾ ಅವರು 8 ನೇ ತರಗತಿಯವರೆಗೆ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಬಳಿಕ 10 ನೇ ತರಗತಿಗೆ ಗರ್ಲ್ಸ್ ಹೈಯರ್ ಸೆಕೆಂಡರಿ ಶಾಲೆಗೆ ಸೇರಿದ ಅವರು, 11 ಮತ್ತು 12 ನೇ ತರಗತಿ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಮುಂದುವರೆಸುತ್ತಾರೆ.
ಮುದಿತಾ ಅವರು ತನ್ನ ಪದವಿಪೂರ್ವ ಶಿಕ್ಷಣದ ಬಳಿಕ ಜೋಧ್ ಪುರದ ಎಸ್ ಎನ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆಯುತ್ತಾರೆ. ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿದ ಮುದಿತಾ ಅವರಿಗೆ ಬಾಲ್ಯದಿಂದಲೂ ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆ ಇತ್ತು. ತನ್ನ ಕನಸನ್ನು ನನಸಾಗಿಸಿಕೊಳ್ಳಲು ವೈದ್ಯಕೀಯ ಅಭ್ಯಾಸವನ್ನು ತೊರೆದು ಯುಪಿಎಸ್ ಸಿ ಪರೀಕ್ಷೆ ಬರೆಯಲು ತಯಾರಿಯನ್ನು ನಡೆಸಲು ಪ್ರಾರಂಭಿಸುತ್ತಾರೆ.
ಇನ್ನು ಮುದಿತಾ ಅವರು ಕೋವಿಡ್- 19 ಸಮಯದಲ್ಲಿ ತಮ್ಮ ಯುಪಿಎಸ್ ಸಿ ಪರೀಕ್ಷಾ ತಯಾರಿಗೆ ತಾತ್ಕಾಲಿಕವಾಗಿ ವಿರಾಮ ನೀಡಿ, ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಉದ್ದೇಶದಿಂದ ಜೈಪುರದಲ್ಲಿ ಕಿರಿಯ ವೈದ್ಯರಾಗಿ ಕೆಲಸ ಮಾಡುತ್ತಾರೆ. ಇದಾದ ಬಳಿಕ ಮುದಿತಾ ಅವರು ಯುಪಿಎಸ್ ಸಿ ಪರೀಕ್ಷೆಗೆ ಸಿದ್ಧತೆಯನ್ನು ಪುನರಾರಂಭಿಸುತ್ತಾರೆ. ಜೊತೆಗೆ ದೆಹಲಿಯಲ್ಲಿ ಯುಪಿಎಸ್ ಸಿ ತರಬೇತಿಗೆ ಸೇರಿಕೊಳ್ಳುತ್ತಾರೆ.
2022 ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ಮುದಿತಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಜೊತೆಗೆ 381 ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸಿದ ಅವರು ತಮ್ಮ ಕಠಿಣ ಪರಿಶ್ರಮದ ಮೂಲಕ ಐಎಎಸ್ ಅಧಿಕಾರಿಯಾಗುತ್ತಾರೆ.