ಪುಲ್ವಾಮ, ಮೇ 06 (Daijiworld News/MSP): ಭಯೋತ್ಪಾದಕ ಸಂಘಟನೆಗೆ ಸೇರಿದ ಯುವಕನೋರ್ವ ಭಯೋತ್ಪಾದಕ ಹಿಂಸಾಚಾರವನ್ನು ಬಿಟ್ಟು ದಕ್ಷಿಣ ಕಾಶ್ಮೀರದಲ್ಲಿರುವ ತನ್ನ ಮನೆಗೆ ಹಿಂದಿರುಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯುವಕನ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಯುವಕನ ಸುರಕ್ಷತೆಗಾಗಿ ಗುರುತು ಹೇಳಲು ನಿರಾಕರಿಸಿರುವ ಪೊಲೀಸ್ ಅಧಿಕಾರಿಗಳು ನಮಗೆ ಆತ ತುಂಬಾ ಮುಖ್ಯ ಎಂದಿದ್ದಾರೆ. ಆತನನ್ನು ಮುಖ್ಯವಾಹಿನಿಗೆ ತರಲು ಕುಟುಂಬ ಸದಸ್ಯರು, ಪೊಲೀಸರ ಸಹಕಾರ ಅತ್ಯಂತ ಮಹತ್ವದ್ದಾಗಿದೆ.
ಯುವಕನ ಭದ್ರತೆಗೆ ಎಲ್ಲ ರೀತಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದ ಪೊಲೀಸ್ ಅಧಿಕಾರಿಗಳು ಆತನಿಗೆ ಶುಭ ಹಾರೈಸಿದ್ದಾರೆ. ಕಾಶ್ಮೀರಿ ಯುವಕನೋರ್ವ ಉಗ್ರವಾದನ್ನು ಬಿಟ್ಟು ಮುಖ್ಯವಾಹಿನಿಗೆ ಬಂದಿರುವ ಎರಡನೇ ಉದಾಹರಣೆ ಇದಾಗಿದೆ. ಇದಕ್ಕೂ ಹಿಂದೆ ಏ.30 ರಂದು ಪುಲ್ವಾಮ ಪ್ರದೇಶದ ಓರ್ವ ಭಯೋತ್ಪಾದಕ ಹಿಂಸಾಚಾರವನ್ನು ಬಿಟ್ಟು ಶರಣಾಗಿದ್ದ. ಕಾಶ್ಮೀರಿ ಯುವಕರು ಭಯೋತ್ಪಾದಕ ಸಂಘಟನೆಗಳನ್ನು ಸೇರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.