ನವದೆಹಲಿ,ಮೇ 6(DaijiworldNews/AZM):ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿಯವರಿಗೆ ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ.30ರವರೆಗೆ ಬಂಧಿಸದಂತೆ, ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ದೆಹಲಿ ಕೋರ್ಟ್ ಸೂಚಿಸಿದೆ.
ಈಗಾಗಲೇ ಪಿ ಚಿದಂಬರಂ ಹಾಗೂ ಕುಟುಂಬದ ವಿರುದ್ಧ ತನಿಖೆ ನಡೆಸಿರುವ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತಂಡ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದವು. ಅರ್ಜಿ ವಿಚಾರಣೆ ನಡೆಸಿದ ವಿಶೇಷ ಜಡ್ಜ್ ಓ.ಪಿ ಸೈನಿ ಅವರು ಬಂಧನ ವಿನಾಯಿತಿಯನ್ನು ಮೇ 30ರವರೆಗೆ ವಿಸ್ತರಿಸಿದ್ದಾರೆ.
, ಮಾರಿಷಿಯಸ್ ಮೂಲದ- ಮ್ಯಾಕ್ಸಿಸ್ ನ ಸಹವರ್ತಿ ಗ್ಲೋಬಲ್ ಕಮ್ಯೂನಿಕೇಷನ್ ಸರ್ವೀಸಸ್ ಹೋಲ್ಡಿಂಗ್ಸ್ ನಿಂದ ಏರ್ ಸೆಲ್ ಟೆಲಿಕಾಂನಲ್ಲಿ ಎಂಟುನೂರು ಮಿಲಿಯನ್ ಅಮೆರಿಕನ್ ಡಾಲರ್ ನಷ್ಟು ಹೂಡಿಕೆ ಮಾಡಲು ಅನುಮತಿ ಕೇಳಲಾಗಿತ್ತು. ಅದಕ್ಕೆ ಅನುಮತಿ ಪ್ರಧಾನಿ ಅಧ್ಯಕ್ಷರಾಗಿರುವ ಆರ್ಥಿಕ ವ್ಯವಹಾರಗಳ ಸದನ ಸಮಿತಿಯಿಂದ ಬರಬೇಕಿತ್ತು. ಆದರೆ ಹಣಕಾಸು ಸಚಿವಾಲಯವು ಅನುಮತಿ ಕೊಟ್ಟಿತ್ತು. ಆಗ ಅದರ ನೇತೃತ್ವ ವಹಿಸಿದ್ದವರು ಚಿದಂಬರಂ ಎಂದು ಸಿಬಿಐ ಹೇಳಿದೆ.
ಇನ್ನು ಹಣಕಾಸು ಸಚಿವಾಲಯಕ್ಕೆ ಆರು ನೂರು ಕೋಟಿವರೆಗಿನ ಹೂಡಿಕೆಗೆ ಅನುಮತಿ ನೀಡುವ ಅಧಿಕಾರ ಮಾತ್ರ ಇರುತ್ತದೆ. ಅನುಮತಿ ಸಿಕ್ಕ ನಂತರ ಏರ್ ಸೆಲ್ ಟೆಲಿವೆಂಚರ್ಸ್ ನಿಂದ ಕಾರ್ತಿ ಚಿದಂಬರಂಗೆ ನಂಟಿರುವ ಕಂಪೆನಿಗೆ ಇಪ್ಪತ್ತಾರು ಲಕ್ಷ ಪಾವತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಹಾಗೂ ಅವರ ಸಂಸ್ಥೆಗೆ ಸಂಬಂಧಿಸಿದ 1.16 ಕೋಟಿ ರೂಪಾಯಿಯನ್ನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು ಎಂದೂ ಸಿಬಿಐ ಹೇಳಿದೆ.