ಹುಬ್ಬಳ್ಳಿ, ಏ.30(DaijiworldNews/AA): ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಆಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಹೆಚ್ಡಿ ರೇವಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಜತೆ ಒಪ್ಪಂದವಾಗಿದೆ ಎಂಬುದಾಗಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆರೋಪ ಕೇಳಿಬಂದಕೂಡಲೇ ಯಾಕೆ ಪ್ರಜ್ವಲ್ ವಿರುದ್ಧ ರಾಜ್ಯ ಸರ್ಕಾರ ಎಫ್ಐಆರ್ ದಾಖಲಿಸಲಿಲ್ಲ? ಪ್ರಜ್ವಲ್ ರೇವಣ್ಣರನ್ನು ಓಡಿ ಹೋಗುವುದಕ್ಕೆ ಯಾಕೆ ಬಿಟ್ಟರು? ರಾಜ್ಯದ ಪೊಲೀಸರು ಪ್ರಜ್ವಲ್ರನ್ನು ಬಂಧಿಸಬೇಕಿತ್ತು. ಇಲ್ಲಿ ದೂರು ದಾಖಲಾದರೆ ಕೇಂದ್ರ ಸರ್ಕಾರಕ್ಕೆ ಏನಾದರೂ ಕನಸು ಬೀಳುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ಓಡಿಹೋಗಲು ಕೇಂದ್ರ ಸರ್ಕಾರದ ವಿಳಂಬ ನೀತಿ ಕಾರಣ ಎಂಬ ಕಾಂಗ್ರೆಸ್ನ ಕೆಲ ನಾಯಕರು ಆರೋಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಏಕೆ ಬೇಗ ಎಫ್ಐಆರ್ ದಾಖಲಿಸಲಿಲ್ಲ? ಎಫ್ಐಆರ್ ದಾಖಲಿಸುವ ಮೊದಲೇ ಯಾಕೆ ಆರೋಪಿಯನ್ನು ಬಂಧಿಸಲಿಲ್ಲ? ನಾವು ಪ್ರಜ್ವಲ್ರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಜ್ವಲ್ ರೇವಣ್ಣ ಪ್ರಕರಣದಿಂದ ನಮಗೆ ಪರಿಣಾಮವಾಗಲ್ಲ ಎಂದು ತಿಳಿಸಿದ್ದಾರೆ.