ಬೆಂಗಳೂರು,ಮೇ 06 (Daijiworld News/MSP): ತಡವಾದ ರೈಲಿನಿಂದ ನೂರಾರು ವಿದ್ಯಾರ್ಥಿಗಳು ಭಾನುವಾರ ನಡೆದ ನೀಟ್ ಪರೀಕ್ಷೆಯಿಂದ ವಂಚಿತರಾಗಿದ್ದು ಈ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಶಿಫಾರಸ್ಸು ಮಾಡುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಪರೀಕ್ಷೆ ಎದುರಿಸಲು ಉತ್ತರ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಶನಿವಾರ ಹಂಪಿ ಎಕ್ಸ್ಪ್ರೆಸ್ ರೈಲಿನಿಂದ ಹೊರಟಿದ್ದರು. ಆದರೆ ಬೆಳಗ್ಗೆ 7ಗಂಟೆಗೆ ತಲುಪಬೇಕಿದ್ದ ರೈಲು ಮಧ್ಯಾಹ್ನ 2.30ಕ್ಕೆ ಬೆಂಗಳೂರು ತಲುಪಿದೆ. ಹೀಗಾಗಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಬರೆಯುವ ಅವಕಾಶ ಕಳೆದುಕೊಂಡಡು ನೂರಾರು ವಿದ್ಯಾರ್ಥಿಗಳ ಕನಸು ನುಚ್ಚುನೂರಾಗಿತ್ತು.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ವಿದ್ಯಾರ್ಥಿಗಳಿಗೆ ಆದ ತೊಂದರೆಯ ಬಗ್ಗೆ ಮಾಹಿತಿ ನೀಡಲು ಭಾನುವಾರವೇ ಪ್ರಯತ್ನಿಸಿದ್ದೇವೆ. ಆದರೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಎಚ್ಆರ್ಡಿ ಸಚಿವಾಲಯಕ್ಕೆ ಸೋಮವಾರ ಪತ್ರ ಬರೆದಿದ್ದು ಮರು ಪರೀಕ್ಷೆ ಬಗ್ಗೆ ಶಿಫಾರಸು ಮಾಡಲಾಗುವುದು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ವಿನಯ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಪರೀಕ್ಷೆ ಎದುರಿಸಲು ಉತ್ತರ ಕರ್ನಾಟಕದ ನೂರಾರು ವಿದ್ಯಾರ್ಥಿಗಳು ಶನಿವಾರ ಹಂಪಿ ಎಕ್ಸ್ಪ್ರೆಸ್ ರೈಲು ಏರಿದ್ದರು. ಪೂರ್ವ ನಿಗದಿಯಂತೆ ಈ ರೈಲು ಶನಿವಾರ ಸಂಜೆ 6 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಗುಂತಕಲ್-ಅನಂತಪುರ ಮಾರ್ಗವಾಗಿ ಸಂಚರಿಸಿ ಭಾನುವಾರ ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪಬೇಕಿತ್ತು. ಆದರೆ, ಆ ಮಾರ್ಗದಲ್ಲಿನ ಹಳಿ ದುರಸ್ತಿಯಿದ್ದ ಕಾರಣ ಚಿತ್ರದುರ್ಗ, ಕಡೂರು ಮಾರ್ಗವಾಗಿ ಬಂದ ರೈಲು ಮಧ್ಯಾಹ್ನ 2.30ಕ್ಕೆ ಬೆಂಗಳೂರು ತಲುಪಿದೆ. ಹೀಗಾಗಿ ಗದಗ, ಹುಬ್ಬಳ್ಳಿ, ಕೊಪ್ಪಳ ಸೇರಿ ಉತ್ತರ ಕರ್ನಾಟಕ ವಿವಿಧ ಭಾಗಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡಿದ್ದರು.