ಕೊಪ್ಪಳ (ಗಂಗಾವತಿ), ಏ. 30(DaijiworldNews/AK): ನಾನು 50 ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನೇ ಇವತ್ತಿನವರೆಗೂ ನಾನು ನೋಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿ ನುಡಿದರು.
ಗಂಗಾವತಿಯಲ್ಲಿ ನಡೆದ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಬೃಹತ್ ಜನ ಸಾಗರವನ್ನು ಉದ್ಘಾಟಿಸಿ ಮಾತನಾಡಿದರು.
ಪತ್ರಿಕೆಗಳಲ್ಲಿ ಬಿಜೆಪಿ ಇಂದು ಸುಳ್ಳು ಜಾಹಿರಾತು ನೀಡಿದೆ. ಬಿಜೆಪಿ ಅಧಿಕಾರಿದಲ್ಲಿರುವ ಯಾವ ರಾಜ್ಯದಲ್ಲೂ ನಮ್ಮ ಹಾಗೆ ದಲಿತರಿಗೆ ಆರ್ಥಿಕ ಶಕ್ತಿ ನೀಡುವ SCP/TSP ಕಾಯ್ದೆ ಜಾರಿ ಮಾಡದ ಬಿಜೆಪಿ, ಕೇವಲ ಪತ್ರಿಕಾ ಜಾಹಿರಾತು ಮೂಲಕ ಹಾದಿ ತಪ್ಪಿಸುತ್ತಿದೆ. ಈ ಸುಳ್ಳು ಜಾಹಿರಾತು ನಂಬಿ ಮೋಸ ಹೋಗಬೇಡಿ ಎಂದರು.
ನನಗೆ ಗಂಗಾವತಿ ಮನೆ ಇದ್ದಂಗೆ. ನಾನು ಲೋಕಸಭೆಗೆ ನಿಂತಿದ್ದಾಗ ಗಂಗಾವತಿಯಲ್ಲಿ ಬಹುಮತ ಸಿಕ್ಕಿತ್ತು. ಈ ಋಣ ನಾನು ಯಾವತ್ತೂ ಮರೆಯಲ್ಲ. ಈ ಬಾರಿಯೂ ಗಂಗಾವತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಂತ ಹೆಚ್ಚು ಮತಗಳನ್ನು ಕಾಂಗ್ರೆಸ್ ಗೆ ಕೊಡಿಸಿ ಅಭೂತಪೂರ್ವವಾಗಿ ಗೆಲ್ಲಿಸಿ ಎಂದು ಕರೆ ನೀಡಿದರು.
ಹತ್ತತ್ತು ವರ್ಷ ಪ್ರಧಾನಿ ಆಗಿ ಮೋದಿಗೆ ಒಂದೇ ಒಂದು ಭರವಸೆಯನ್ನೂ ಈಡೇರಿಸಲು ಸಾಧ್ಯವಾಗಲಿಲ್ಲ. ಬರೀ ಸುಳ್ಞು ಹೇಳ್ಕೊಂಡು ತಿರುಗಿದ್ರು.ನಾನು ಈ ರಾಜ್ಯದ ಎಲ್ಲಾ ಜಾತಿ, ಎಲ್ಲಾ ವರ್ಗಗಳ ಮತ್ತು ಎಲ್ಲಾ ಧರ್ಮಗಳ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ.ಬಿಜೆಪಿ ಸರ್ಕಾರ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು 2 ಕೆಜಿ ಕಡಿತ ಮಾಡಿತ್ತು. ನಾವು ಮತ್ತೆ ಅಧಿಕಾರಕ್ಕೆ ಬಂದು 10kg ಗೆ ಹೆಚ್ಚಿಸಿದ್ದೇವೆ. ಇದು ಕಾಂಗ್ರೆಸ್ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆ ಯ ಫಲ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭಾರತದ ವಿದ್ಯಾವಂತ ಯುವ ಸಮೂಹವನ್ನು ನಂಬಿಸಿದ ಮೋದಿ ಈಗ ಪಕೋಡ ಮಾರಿ ಎಂದು ಹೇಳಿ ಮೂರು ನಾಮ ಬಳಿದಿದ್ದಾರೆ ಎಂದರು.ರಿಪಬ್ಲಿಕ್ ಆಫ್ ಬಳ್ಳಾರಿ ಎನ್ನುವ ಅಪಕೀರ್ತಿಗೆ ಕಾರಣರಾದ ಜನಾರ್ಧನರೆಡ್ಡಿಯವರನ್ನು ಗೆಲ್ಲಿಸಿ ಮಾಡಿದ ತಪ್ಪು ಲೋಕಸಭೆಯಲ್ಲಿ ಮರುಕಳಿಸಬಾರದು. ಅನ್ಸಾರಿ ಗೆದ್ದಿದ್ರೆ ನಮ್ಮ ಸರ್ಕಾರದಲ್ಲಿ ಮಂತ್ರಿ ಆಗಿರ್ತಾ ಇದ್ರು.ಪಕ್ಷದಿಂದ ಪಕ್ಷಕ್ಕೆ ಪದೇ ಪದೇ ಹಾರುವವರನ್ನು ಬೆಳೆಸಬೇಡಿ. ಜನಾರ್ದನರೆಡ್ಡಿಯವರ ಸುಳ್ಳುಗಳನ್ನು ನಂಬಬೇಡಿ ಎಂದು ಹೇಳಿದರು.