ಹರಿಯಾಣ, ಮೇ.1(DaijiworldNews/AK): ಯುಪಿಎಸ್ಸಿ ಪರೀಕ್ಷೆ ಗೆದ್ದೇ ಗೆಲ್ಲುತ್ತೇನೆ ಎಂಬ ಹಠದಿಂದ ಅದಕ್ಕಾಗಿ 35 ವೈಫಲ್ಯಗಳನ್ನು ಸಹಿಸಿಕೊಂಡು ಮುಂದೆ ಯಶಸ್ಸು ಪಡೆದಿರುವವರು ಇದ್ದಾರೆ. ಇದನ್ನ ನಂಬ್ತಿರಾ. ಬಹುಶಃ ಇದೊಂದು ಅತಿದೊಡ್ಡ ಆಶ್ಚರ್ಯಕರ ಸಂಗತಿ, ತಾಳ್ಮೆಯ ಲೆವೆಲ್ಲೇ ಬೇರೆ ಇದೆ ಎಂದು ಹೇಳಬಹುದು. ಯುಪಿಎಸ್ಸಿ ಆಕಾಂಕ್ಷಿಗಳೇ.. ಆದರೆ ಇದು ನಿಜವಾಗಿದೆ. ಹೌದು.. ಹರಿಯಾಣ ಮೂಲದ ವಿಜಯ್ ವರ್ಧನ್ ರವರ ಯುಪಿಎಸ್ಸಿ ಸಕ್ಸಸ್ ಸ್ಟೋರಿ
ವಿಜಯ್ ವರ್ಧನ್ ಪದೇ ಪದೇ ಪರೀಕ್ಷೆಗಳಲ್ಲಿ ಫೇಲಾದರೂ ಸಹ ಅವರು ತಮ್ಮ ಗುರಿಯನ್ನು ಬಿಡಲಿಲ್ಲ. ನಿರಂತರ ಪ್ರಯತ್ನ ಇತ್ತು. ಎಷ್ಟೆಂದರೆ ಅವರು 30 ಕ್ಕೂ ಹೆಚ್ಚು ಬಾರಿಯ ಪರೀಕ್ಷೆಗಳಲ್ಲಿ ವೈಪಲ್ಯವನ್ನು ಕಂಡರೂ ಸಹ ಯಶಸ್ಸಿನ ಅನ್ವೇಷಣೆಯಲ್ಲಿ ಅವರು ಮುಂದುವರಿದರು. ವರ್ಧನ್ ಮೂಲತಃ ಹರಿಯಾಣದ ಸಿರ್ಸಾದವರು. ಇವರ ಶೈಕ್ಷಣಿಕ ಪ್ರಯಾಣವು ಅವರ ತವರೂರಿನಲ್ಲೇ ಆರಂಭವಾಯಿತು.
ನಂತರ ಬಿ.ಟೆಕ್ ಇನ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಅನ್ನು ಹಿಸಾರ್ನಲ್ಲಿ ಪಡೆದರು. ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಬೇಕು ಎನ್ನುವ ಅವರ ಮಹತ್ವಕಾಂಕ್ಷೆಯು ಅವರನ್ನು ದೆಹಲಿಗೆ ಕರೆದುಕೊಂಡು ಬಂತು. ಯುಪಿಎಸ್ಸಿ'ಗೆ ಓದುವ ಜತೆಗೆ ಅವರು ಹರಿಯಾಣ ಪಬ್ಲಿಕ್ ಸರ್ವೀಸ್ ಕಮಿಷನ್, ಯುಪಿಪಿಎಸ್ಸಿ, ಎಸ್ಎಸ್ಸಿ, ಪಿಸಿಎಸ್ ಸೇರಿದಂತೆ ಅವರು 30 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದರು ಎಲ್ಲದರಲ್ಲಿಯೂ ನಿರಾಶೆ ಎದುರಿಸಿದರು.
ಇಷ್ಟೆಲ್ಲಾ ಪರೀಕ್ಷೆಗಳನ್ನು ಬರೆದ ಅವರಿಗೆ ಯುಪಿಎಸ್ಸಿ ಪರೀಕ್ಷೆ ಖಂಡಿತ ಸುಲಭವಲ್ಲ ಎಂಬುದು ತಿಳಿಯಿತು. ಅದೊಂದು ಅಸಾಧಾರಣ ಸವಾಲು ಎಂದು ಅವರಿಗೆ ತಿಳಿಯಿತು. ಮೊದಲು 2014 ರಲ್ಲಿ ಮೊದಲ ಬಾರಿಗೆ ಸಿವಿಲ್ ಸೇವೆಗಳ ಪರೀಕ್ಷೆ ಬರೆದರು, ನಂತರದ 4 ಪ್ರಯತ್ನಗಳು ಸಹ ಯಾವುದೇ ಯಶಸ್ಸನ್ನು ನೀಡಲಿಲ್ಲ. ಈ ಫೇಲ್ಗಳಿಂದ ಹತಾಶೆಗೆ ಒಳಗಾಗುವ ಬದಲು, ವರ್ಧನ್ ರವರು ಈ ಸೋಲುಗಳನ್ನೇ ತಮ್ಮ ಮೆಟ್ಟಿಲುಗಳಾಗಿ ಸ್ವೀಕಾರ ಮಾಡಿದರು.
ಅಂತಿಮವಾಗಿ ವಿಜಯ್ ವರ್ಧನ್ ರವರು 2018 ರಲ್ಲಿ 104th Rank ನೊಂದಿಗೆ ಯುಪಿಎಸ್ಸಿಯನ್ನು ಪಾಸ್ ಆದರು. ಈ ಫಲಿತಾಂಶದೊಂದಿಗೆ ಐಪಿಎಸ್ ಸೇವೆಗೆ ಸೇರುವ ಮೂಲಕ ತಮ್ಮ ಯಶಸ್ಸಿನ ಬಾಗಿಲು ಕೊನೆಗೂ ತೆರೆದು ಪ್ರವೇಶಿಸಿದರು. ಆದರೆ ಈ ಸಾಧನೆಯ ಹೊರತಾಗಿಯೂ ಅವರು ತಮ್ಮ ಗುರಿ ಇನ್ನು ಮುಟ್ಟಿರಲಿಲ್ಲ ಎಂಬುದು ಕುತೂಹಲಕಾರಿ ಆಗಿತ್ತು. ಕಾರಣ ಅವರ ಉದ್ದೇಶ ಐಎಎಸ್ ಸೇವೆಯ ಕಡೆ ಪ್ರೇರೇಪಿಸಿತ್ತು. ನಿರಂತರ ಪರಿಶ್ರಮದಿಂದ ತಮ್ಮ ಸಾಧನೆಗಳ ಸಾಲಿಗೆ 2021 ರಲ್ಲಿ ಸಿಎಸ್ಇ ಪಾಸ್ ಮಾಡುವ ಮೂಲಕ ತಮ್ಮ ಐಎಎಸ್ ಗುರಿಯನ್ನು ಮುಟ್ಟಿ, ಸೇವೆಗೆ ಸೇರಿಸಿದರು.