ಲಕ್ನೋ, ಮೇ.1(DaijiworldNews/AA): ಕೊರೊನ ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮದ ಕುರಿತು ಹರಿದಾಡುತ್ತಿರುವ ವಿವಾದದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು. ಇಂತಹ ಮಾರಕ ಔಷಧಗಳಿಗೆ ಅನುಮತಿ ನೀಡುವ ಮೂಲಕ ಕೊಲೆ ಸಂಚು ಹೂಡಲಾಗಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಬರೆದುಕೊಂಡಿದ್ದಾರೆ.
ಇನ್ನು ಸುಮಾರು 80 ಕೋಟಿ ಭಾರತೀಯರಿಗೆ 2 ಡೋಸ್ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಲಸಿಕೆಯಿಂದ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ಔಷಧ ತಯಾರಕ ಕಂಪನಿ ಹೇಳಿದೆ. ಲಸಿಕೆಯ ಅಡ್ಡಪರಿಣಾಮದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಹಾಗೂ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಭಯ ವ್ಯಕ್ತಪಡಿಸಿದವರ ಅನುಮಾನಗಳು ಈಗ ನಿಜವೆಂದು ಸಾಬೀತಾಗಿದೆ ಎಂದಿದ್ದಾರೆ.