ಯಾದಗಿರಿ, ಮೇ.1(DaijiworldNews/AK):ದೇಶದ ನಾರಿ ಶಕ್ತಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಹಾಗೂ ಕುಮಾರಸ್ವಾಮಿ ಹಾಸನದ ಹೆಣ್ಣುಮಕ್ಕಳ,ಅಲ್ಲಿನ ಸಂತ್ರಸ್ತೆಯರ ಪರವಾಗಿ ಯಾಕೆ ಧ್ವನಿ ಎತ್ತುತ್ತಾ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರಶ್ನಿಸಿದರು.
ಯಾದಗಿರಿಯ ದೇವತ್ಕಲ್ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯಿಸಿ, ಹಾಸನದ ಪೆನ್ ಡ್ರೈವ್ ಪ್ರಕರಣದ ಹಿಂದೆ ಮಹಾನಾಯಕರ ಕೈವಾಡವಿದೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಡಿಸಿಎಂ ಡಿಕೇಶಿ ತಿರುಗೇಟು ನೀಡಿದರು.
ಮೊದಲೇ ಎಲ್ಲವೂ ತಿಳಿದಿದ್ದ ದೇವರಾಜೇ ಗೌಡ ಹಾಸನದ ವಿಡಿಯೋ ವಿಷಯವಾಗಿ ಯಾರನ್ನೆಲ್ಲಾ ಭೇಟಿ ಮಾಡಿದ್ದಾರೆ ಎಂದು ಈಗಾಗಲೇ ಕಾಂಗ್ರೆಸ್ ವಕ್ತಾರರು ವಿವರಿಸಿದ್ದಾರೆ.
ಸ್ವತಃ ದೇವರಾಜೇ ಗೌಡ, ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು, ಅಲ್ಲದೇ ಬಿಜೆಪಿ ನಾಯಕರಿಗೆ ಈ ವಿಚಾರ ತಿಳಿಸಿದ್ದರು. ಈ ಪೆನ್ಡ್ರೈವ್ ಬಿಡುಗಡೆ ಮಾಡಬೇಕಿದ್ದರೆ ಮೊದಲೇ ಬಿಡುಗಡೆ ಮಾಡುತ್ತಿದ್ದೆವು, ನಮಗೆ ಈ ತರಹದ ಕೀಳುಮಟ್ಟದ ರಾಜಕೀಯ ಬೇಡ, ಕುಮಾರಸ್ವಾಮಿಯವರ ಆರೋಪಕ್ಕೆ ಎಳ್ಳಷ್ಟು ಬೆಲೆ ಇಲ್ಲ ಎಂದು ಕಿಡಿಕಾರಿದರು.