ಕೋಲ್ಕತ್ತಾ, ಮೇ 06 (Daijiworld News/MSP): ಫೋನಿ ಚಂಡಮಾರುತದಿಂದ ಆಗಿರುವ ಹಾನಿ ಬಗ್ಗೆ ನಿರ್ಣಯಿಸಲು ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯ ವೈಮಾನಿಕ ಸಮೀಕ್ಷೆಗೆ ಅನುಮತಿ ನೀಡಲು ಸಿಎಂ ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳದಲ್ಲಿಯೂ ಪರಿಶೀಲನಾ ಸಭೆ ನಡೆಸಲು ಪ್ರಧಾನಿ ಕಚೇರಿಯಿಂದ ಮುಖ್ಯಮಂತ್ರಿ ಮಮತಾ ಅವರಿಗೆ ಭಾನುವಾರದಂದು ಎರಡು ಬಾರಿ ಕರೆ ಮಾಡಿದರೂ ಮಮತಾ ಕರೆ ಸ್ವೀಕರಿಸದೆ, ಪ್ರಧಾನಿ ಕರೆಯನ್ನು ಕಡೆಗಣಿಸಿದ್ದಾರೆ ಎನ್ನಲಾಗಿದೆ. ಎರಡು ಸಂದರ್ಭದಲ್ಲೂ ಮರಳಿ ಕರೆ ಮಾಡಲಾಗುವುದು ಎಂದು ತಿಳಿಸಲಾಯಿತು ಬಿಟ್ಟರೆ ಬೇರೆ ಯಾವುದೇ ರೀತಿಯಲ್ಲಿ ರೆಸ್ಪಾನ್ಸ್ ಮಾಡಿರಲಿಲ್ಲ ಎನ್ನಲಾಗಿದೆ.
ರಾಷ್ಟ್ರೀಯ ಮಾಧ್ಯಮದ ವರದಿ ಪ್ರಕಾರ, ಒಡಿಸ್ಸಾದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಫೋನಿ ಚಂಡಮಾರುತ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಯೋಜನೆಯಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ರವಾನಿಸಿದ್ದರು.
ಆದರೆ ಅಧಿಕಾರಿಗಳೆಲ್ಲ ಚುನಾವಣಾ ಕರ್ತವ್ಯದಲ್ಲಿ ತೊಡಗಿರುವುದರಿಂದ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಮೋದಿ ಭೇಟಿಗೆ ನೋ ಎಂದಿದೆ.