ಹರಿಯಾಣ,ಮೇ 06 (Daijiworld News/MSP): ಅಖಾಡದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಗುರುವಾದ ಎಲ್ ಕೆ ಆಡ್ವಾಣಿಗೆ ಮುಖಕ್ಕೆ ಪಂಚ್ ನೀಡಿದ್ದಾರೆ ಎಂದು ಮತ್ತೊಮ್ಮೆ ಅಡ್ವಾಣಿ ವಿಚಾರವಾಗಿ ನರೇಂದ್ರ ಮೋದಿ ವಿರುದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಹರಿಯಾಣದ ಭಿವಾನಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನರೇಂದ್ರ ಮೋದಿ ಬಾಕ್ಸರ್ ನಂತೆ ವರ್ತಿಸುತ್ತಿದ್ದಾರೆ. ಈ ಹಿಂದೆ ಅಧಿಕಾರಕ್ಕೆ ಬಂದಾಗ ಅವರು ಭಾರತದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಮತ್ತು ಭ್ರಷ್ಟಾಚಾರವನ್ನು ತೊಲಗಿಸುವ ಭರವಸೆ ನೀಡಿ ಆಡಳಿತ ಚುಕ್ಕಾಣಿ ಹಿಡಿದರು. ಆದ್ರೆ ಈ ಸಮಸ್ಯೆಗಳನ್ನು ನಿವಾರಿಸುವ ಕಡೆ ಗಮನಹರಿಸುವ ಬದಲು ತಮ್ಮ ಕೋಚ್ ಆಗಿದ್ದ ಎಲ್ ಕೆ ಆಡ್ವಾಣಿ ಮುಖಕ್ಕೆ ಪಂಚ್ ನೀಡಿದ್ದಾರೆ ಎಂದರು.
ಪಕ್ಷಕ್ಕಾಗಿ ದುಡಿದ ಆಡ್ವಾಣಿ ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿದೆ ಎಂದು ಎಂದು ಆರೋಪಿಸಿ ಪ್ರಧಾನಿ ವಿರುದ್ದ ರಾಹುಲ್ ಹಲವಾರು ಬಾರಿ ಟೀಕಿಸಿದ್ದು ಈ ಬಾರಿಯೂ ಇದೇ ಆರೋಪವನ್ನು ಮಾಡಿದ್ದಾರೆ.
ಎಲ್ ಕೆ ಆಡ್ವಾಣಿ ಮಾತ್ರವಲ್ಲದೆ ನಿತಿನ್ ಗಡ್ಕರಿ ಹಾಗೂ ಅರುಣ್ ಜೇಟ್ಲಿ ಅವರಿಗೂ ಬಾಕ್ಸರ್ ನರೇಂದ್ರ ಮೋದಿ ಪಂಚ್ ನೀಡಿ ಬಳಿಕ ಅಖಾಡದಿಂದ ಇಳಿದು ಜನಸಾಮಾನ್ಯರ ಕಡೆ ಧಾವಿಸಿ ರೈತರಿಗೆ ಮತ್ತು ಸಣ್ಣ ವರ್ತಕರಿಗೆ ಪಂಚ್ ನೀಡಿದರು ಎಂದು ವ್ಯಂಗ್ಯವಾಡಿದರು.