ನವದೆಹಲಿ, ಮೇ06(Daijiworld News/SS): ಪ್ರಗತಿಯಲ್ಲಿ ನಂಬಿಕೆ ಇಲ್ಲದ, ಅಪಸ್ವರವನ್ನೇ ಬಂಡವಾಳವಾಗಿಸಿ ತನ್ನ ರಾಜಕೀಯ ಅಸ್ತಿತ್ವದ ಬಗ್ಗೆ ಮಾತ್ರ ಕಾಳಜಿ ಹೊಂದಿರುವ ಮೋದಿ ನೇತ್ರತ್ವದ ಬಿಜೆಪಿ ಸರ್ಕಾರವನ್ನು ಹೊರಗಟ್ಟುವ ಸಮಯ ಬಂದಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಐದು ವರ್ಷಗಳಲ್ಲಿ ಮೋದಿ ಅವರು ಭಾರತವನ್ನು ಪರಿವರ್ತಿಸುವ ಬಗ್ಗೆ ಹಲವು ಬಾರಿ ಮಾತನಾಡಿದ್ದಾರೆ. ದೇಶವನ್ನು ‘ನವಭಾರತ’ ಎಂದು ಬಣ್ಣಿಸಿದ್ದಾರೆ. ಆದರೆ, ಮೋದಿ ನೇತೃತ್ವದ ಐದು ವರ್ಷಗಳು ಆಡಳಿತ ಮತ್ತು ವಿಶ್ವಾಸಾರ್ಹತೆ ವೈಫಲ್ಯದ ವಿಷಾದದ ಕತೆ. ‘ಅಚ್ಛೇ ದಿನ್’ ಭರವಸೆಯೊಂದಿಗೆ ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದರು. ಅವರ ಐದು ವರ್ಷದ ಆಳ್ವಿಕೆಯು ಭಾರತದ ಯುವ ಜನರು, ರೈತರು, ವರ್ತಕರು ಮತ್ತು ಪ್ರಜಾತಂತ್ರದ ಪ್ರತಿಯೊಂದು ಸಂಸ್ಥೆಗೂ ವೇದನಾದಾಯಕ ಮತ್ತು ವಿಧ್ವಂಸಕವಾದವು ಎಂದು ಹೇಳಿದ್ದಾರೆ.
ಮಾತ್ರವಲ್ಲ, ಈ ಸರ್ಕಾರವು ಜಾರಿಗೆ ತಂದ ಅಸಮರ್ಪಕ ಮತ್ತು ಅಕಾಲಿಕ ನೀತಿಗಳಿಂದಾಗಿ ತೊಂದರೆಗೆ ಒಳಗಾಗದ ಒಂದು ಜನವರ್ಗವನ್ನು ತೋರಿಸಿ ಎಂದು ಸವಾಲು ಹಾಕಿದರು.
ವರ್ತಕರು ಮತ್ತು ಸಣ್ಣ ಉದ್ದಿಮೆದಾರರ ಗಳಿಕೆಯನ್ನು ನೋಟು ರದ್ದತಿಯು ತೊಡೆದು ಹಾಕಿತು. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಸರ್ಕಾರದ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡವು. ಮಧ್ಯಮ ವರ್ಗವು ಕಷ್ಟಪಟ್ಟು ಮಾಡಿದ್ದ ಉಳಿತಾಯವನ್ನು ತೊಳೆದು ಹಾಕಿತು. ಮಹಿಳೆಯರು ಭದ್ರತೆ ಮತ್ತು ಸಶಕ್ತತೆಯ ಭಾವವನ್ನು ಕಳೆದುಕೊಳ್ಳುವಂತೆ ಮಾಡಿತು ಎಂದು ಟೀಕಿಸಿದರು.
ಮೋದಿ ಸರ್ಕಾರದಿಂದಾಗಿ ಶೋಷಿತ ವರ್ಗಗಳು ತಮ್ಮ ಪರಂಪರಾಗತ ಹಕ್ಕುಗಳನ್ನು ಕಳೆದುಕೊಂಡವು. ಸಂಸ್ಥೆಗಳು ಸ್ವಾತಂತ್ರ್ಯ ಕಳೆದುಕೊಂಡವು. ವೈಜ್ಞಾನಿಕ ಮನೋಭಾವದ ಜಾಗದಲ್ಲಿ ಮೌಢ್ಯ ನೆಲೆಯೂರಿತು. ತಮ್ಮ ಸರ್ಕಾರ ಬಂದ ಬಳಿಕ ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಏರಿದೆ ಎಂದು ಮೋದಿ ಅವರು ಹೇಳಿಕೊಳ್ಳುತ್ತಿದ್ದಾರೆ. ಭಾರತದ ಪ್ರಧಾನಿಯಾದವರು ದಶಕಗಳಿಂದ ಭೇಟಿ ಕೊಡದ ದೇಶಗಳಿಗೆ ತಾವು ಹೋಗಿದ್ದಾಗಿ ಹೇಳಿದ್ದಾರೆ. ಈ ವಾದವನ್ನು ಒಪ್ಪುವಿರಾ...? ಎಂದು ಪ್ರಶ್ನಿಸಿದರು.
ಯುಪಿಎ ಸರ್ಕಾರ ಇದ್ದಾಗ ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ, ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದ ದೇಶಗಳ ಜತೆಗೆ ಭಾರತದ ಸಂಬಂಧ ಅದ್ಭುತವಾಗಿತ್ತು. ಪರಸ್ಪರ ಸಹಕಾರ ಮತ್ತು ನಮ್ಮ ರಾಷ್ಟ್ರೀಯ ಕಾಳಜಿಗಳ ಆಧಾರದಲ್ಲಿ ಈ ಸಂಬಂಧವನ್ನು ವೃದ್ಧಿ ಮಾಡಲಾಗಿತ್ತು. ಅಮೆರಿಕದ ಜತೆಗೆ ನಾಗರಿಕ ಪರಮಾಣು ಒಪ್ಪಂದ, ದಕ್ಷಿಣ ಕೊರಿಯಾ, ಜಪಾನ್, ಮಲೇಷ್ಯಾ, ಆಸಿಯಾನ್ ದೇಶಗಳ ಜತೆಗೆ ಮುಕ್ತ ವ್ಯಾಪಾರದ ಅಸಂಖ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಚೀನಾ ಜತೆಗೆ ಗಡಿ ಮಾತುಕತೆ ನಡೆಸಲಾಗಿತ್ತು. ಮುಂಬೈ ದಾಳಿಯ ಬಳಿಕ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ಏಕಾಂಗಿಯಾಗಿಸಲು ಭಾರತ ಶಕ್ತವಾಗಿತ್ತು ಎಂದು ಹೇಳಿದರು.
ಮೋದಿ ಸರ್ಕಾರದ ವಿರುದ್ಧ ಎಷ್ಟೇ ಆರೋಪ ಬಂದರೂ ಅವುಗಳ ಬಗ್ಗೆ ಪರಿಶೀಲನೆಗೇ ಸರ್ಕಾರ ಮುಂದಾಗಿಲ್ಲ. ಆರೋಪ ಮಾಡಿದವರನ್ನೇ ಗುರಿಯಾಗಿಸುವ ಮನೋಭಾವ ಇದೆ. ಪಾರದರ್ಶಕತೆ ತರುವುದು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಭರವಸೆಯೊಂದಿಗೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂತು. ಐದು ವರ್ಷಗಳಲ್ಲಿ ಭ್ರಷ್ಟಾಚಾರವು ಊಹಿಸಲು ಸಾಧ್ಯವಾಗದ ಮಟ್ಟಕ್ಕೆ ಏರಿದೆ ಎಂದು ದೂರಿದರು.