ನವದೆಹಲಿ, ಮೇ.4(DaijiworldNews/AA): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಕಲಿ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ಜತೆಗೆ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ಗಳಡಿ ಕ್ರಿಮಿನಲ್ ಪಿತೂರಿ ದಾಖಲಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸರು ಶನಿವಾರ ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತೆಲಂಗಾಣ ಕಾಂಗ್ರೆಸ್ನ ಐವರು ಸಾಮಾಜಿಕ ಜಾಲತಾಣ ಕಾರ್ಯಕರ್ತರನ್ನು ಶುಕ್ರವಾರ ಬಂಧಿಸಲಾಗಿತ್ತು. ನಂತರ ಜಾಮೀನು ಮೇರೆಗೆ ಬಿಡುಗಡೆ ಹೊಂದಿದ್ದರು. ಇತ್ತೀಚೆಗೆ ಅಮಿತ್ ಶಾ ಅವರ ಹೇಳಿಕೆಯ ತಿರುಚಿದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.
ಸಾಮಾಜಿಕ ಜಾಲತಾಣ ಎಕ್ಸ್'ನಲ್ಲಿ 'ಸ್ಪಿರಿಟ್ ಆಫ್ ಕಾಂಗ್ರೆಸ್' ಖಾತೆಯನ್ನು ನಿರ್ವಹಿಸಿದ್ದ ಹೈದರಾಬಾದ್ ಮೂಲದ ಅರುಣ್ ಬೀರೆಡ್ಡಿ ಅವರನ್ನು ಶುಕ್ರವಾರ ದೆಹಲಿಯಲ್ಲಿ ಬಂಧಿಸಲಾಗಿದೆ. ಅರುಣ್ ಬೀರೆಡ್ಡಿ ವಿರುದ್ಧ ಎಫ್ಐಆರ್ ಜತೆಗೆ ಐಪಿಸಿ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಅನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.