ಬೆಂಗಳೂರು, ಮೇ.5(DaijiworldNews/AK): ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು 4 ದಿನ ಎಸ್ಐಟಿ ವಶಕ್ಕೆ ನೀಡಿ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.
ನೋಟಿಸ್ ನೀಡಿದರೂ ವಿಚಾರಣೆಗೆ ಗೈರಾಗಿದ್ದ ರೇವಣ್ಣ ಅವರನ್ನು ಎಸ್ಐಟಿ ತಂಡ ನಿನ್ನೆ ದೇವೇಗೌಡರ ನಿವಾಸದಲ್ಲಿ ಬಂಧಿಸಿತ್ತು. ಇಂದು ವೈದ್ಯಕೀಯ ಪರೀಕ್ಷೆ ಬಳಿಕ ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ನ್ಯಾಯಾಧೀಶರು, ರೇವಣ್ಣರನ್ನು 4 ದಿನಗಳ ಕಾಲ ಎಸ್ಐಟಿ ವಶಕ್ಕೆ ಒಪ್ಪಿಸಿದೆ.
ಎಸ್ಐಟಿ ತಂಡ ರೇವಣ್ಣರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿತು. ಇದಕ್ಕೆ ರೇವಣ್ಣ ಪರ ವಕೀಲ ಮೂರ್ತಿ ಡಿ. ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದರು. ಜಾಮೀನು ನೀಡುವಂತೆ ಮನವಿ ಮಾಡಿದರು.
ಮಾಜಿ ಸಚಿವರ ವಿರುದ್ಧ ಸುಮಾರು 15 ಕ್ಕೂ ಹೆಚ್ಚು ಅಂಶಗಳನ್ನು ಉಲ್ಲೇಖಿಸಿ ಎಸ್ಐಟಿ 5 ದಿನ ಕಸ್ಟಡಿಗೆ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿತು. ಮೇ 8 ರವರೆಗೆ ಮಾಜಿ ಸಚಿವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ವಹಿಸಲಾಗಿದೆ.