ಮೈಸೂರು, ಮೇ06(Daijiworld News/SS): ಕಳೆದ ಕೆಲ ದಿನಗಳ ಹಿಂದೆ ವಿಶ್ವ ವಿಖ್ಯಾತ ಮೈಸೂರು ದಸರಾ ಗಜಪಡೆಯ ಆನೆ ದ್ರೋಣ ಸಾವಿಗೀಡಾಗಿತ್ತು. ನೀರು ಕುಡಿಯುವ ವೇಳೆಯಲ್ಲಿ ಆನೆ ಕುಸಿದು ಬಿದ್ದು ಸಾವನ್ನಪ್ಪಿತ್ತು. ಆದರೆ ಇದೀಗ ಒಂದು ವೇಳೆ ಸಮಯಕ್ಕೆ ಸರಿಯಾಗಿ ವೈದ್ಯರು ಆಗಮಿಸಿದ್ದಲ್ಲಿ ಆತ ಬದುಕುತ್ತಿದ್ದ ಎಂದು ಮಾವುತರು ಕೊರಗುತ್ತಿದ್ದಾರೆ.
ನಾಗರಹೊಳೆ, ಮಡಿಕೇರಿ, ತಿತಿಮತಿ, ದುಬಾರೆ, ಬಳ್ಳೆ ಆನೆಗಳ ಶಿಬಿರಗಳಲ್ಲಿ ತಲಾ 20ಕ್ಕೂ ಹೆಚ್ಚು ಆನೆಗಳನ್ನು ಸಾಕಲಾಗುತ್ತಿದೆ. ಹುಲಿ ಸೆರೆ, ಮರದ ದಿಮ್ಮಿಗಳ ಸಾಗಣೆ ಹಾಗೂ ಇನ್ನಿತರ ಕೆಲಸಗಳಿಗೆ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಅವುಗಳನ್ನು ನೋಡಿಕೊಳ್ಳಲು ಕಾವಾಡಿಗಳು ಹಾಗೂ ಮಾವುತರು ಇದ್ದಾರೆ. ಸಣ್ಣಪುಟ್ಟ ಕಾಯಿಲೆಗಳು ಕಂಡು ಬಂದಲ್ಲಿ ಕಾವಾಡಿಗಳು ಹಾಗೂ ಮಾವುತರ ಪರಂಪರಾಗತವಾಗಿ ಬಂದ ದೇಸಿ ಪದ್ಧತಿ ಚಿಕಿತ್ಸೆ ಮೂಲಕ ಸಮಸ್ಯೆ ಪರಿಹರಿಸುತ್ತಾರೆ. ಆದರೆ ಆಂಥ್ರಾಕ್ಸ್, ಅತಿಸಾರ, ವೈರಲ್, ಅಸ್ತಮಾ, ಬ್ಯಾಕ್ಟೀರಿಯಾ ಕಾರಣದಿಂದ ಬರುವ ಕಾಯಿಲೆಗಳು ಕಂಡುಬಂದಲ್ಲಿ ಚಿಕಿತ್ಸೆ ನೀಡಲು ವೈದ್ಯರು ಬೇಕೇ ಬೇಕು. ಇಲ್ಲವಾದಲ್ಲಿ ಕಾಯಿಲೆ ಉಲ್ಬಣಗೊಂಡು ಆನೆಗಳು ಸಾವಿಗೀಡಾಗುವ ಸಾಧ್ಯತೆ ಹೆಚ್ಚು ಎಂದು ಮಾವುತರು ಹೇಳಿದ್ದಾರೆ.
ಮಾವುತರು ಶಿಬಿರದಲ್ಲಿ ಆನೆಗಳು ಕಾಯಿಲೆಗಳಾದ ಸಂದರ್ಭ ವೈದ್ಯರಿಗೆ ಕೂಡಲೇ ದೂರವಾಣಿ ಮೂಲಕ ವಿಚಾರ ತಿಳಿಸುತ್ತಾರೆ. ಆದರೆ ವೈದ್ಯರು ನಿಗದಿತ ಸ್ಥಳ ತಲುಪಲು ಕನಿಷ್ಠ ಒಂದು ಗಂಟೆ ಬೇಕಾಗುತ್ತದೆ. ಈ ವೇಳೆ ಆನೆಗಳು ಸಾವನ್ನಪ್ಪುತ್ತದೆ ಎಂದು ಮಾವುತರು ಹೇಳಿದ್ದಾರೆ.
ವೈದ್ಯರ ಕೊರತೆ, ವೈದ್ಯರು ಬರುವುದು ತಡವಾದ ಕಾರಣದಿಂದಲೇ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಸಾವಿಗೀಡಾಗಿದ್ದಾನೆ. ಅಧಿಕಾರಿಗಳಿಗೆ ನೀಡುವ ಸೌಲಭ್ಯದಂತೆ ವೈದ್ಯರಿಗೂ ವಾಹನ ಸೌಕರ್ಯ ನೀಡಿದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.