ಬೆಂಗಳೂರು, ಮೇ.7(DaijiworldNews/AK):ಬಿಜೆಪಿ ಜೊತೆಗೆ ಮೈತ್ರಿ ಆಗಿರೋದು ಸುದೀರ್ಘ ಅವಧಿಗೆ. ಆದರೆ ಪ್ರಜ್ವಲ್ ಪ್ರಕರಣದಿಂದ ಬಿಜೆಪಿ ಅವರಿಗೆ ಮುಜುಗರ ಆಗುತ್ತದೆ ಅನ್ನೋದಾದ್ರೆ, ಅವರು ತೀರ್ಮಾನ ಮಾಡಲಿ. ನಮ್ಮದೇನು ವಿರೋಧ ಇಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಅವರು, ಮೈತ್ರಿ ಮುಂದುವರಿಸುವ ಬಗ್ಗೆ ಆರ್.ಅಶೋಕ್ ಹೇಳಿಕೆ ಪ್ರಸ್ತಾಪಿಸಿ ಮಾತನಾಡಿ, ರಾಷ್ಟ್ರೀಯ ಪಕ್ಷ ಅವರದ್ದು. ಅವರು ಏನ್ ತೀರ್ಮಾನ ಮಾಡ್ತಾರೋ ಮಾಡಲಿ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳೊಲ್ಲ. ಮೈತ್ರಿ ಇರೋತ್ತೋ ಇಲ್ಲವೋ ಮುಂದೆ ನೋಡೋಣ. ತನಿಖೆ ಆಗಿ ಸತ್ಯ ಹೊರಬರಲಿದೆ ಎಂದರು.
ಬಿಜೆಪಿ ಜೊತೆಗೆ ಮೈತ್ರಿ ಆಗಿದ್ದೇ ತಡೆಯೋಕೆ ಆಗ್ತಿಲ್ಲ. ಅದಕ್ಕೆ ಹೀಗೆಲ್ಲ ಮಾತನಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಹೆಸರನ್ನ ಪದೇ ಪದೇ ಬಳಕೆ ಮಾಡಿಕೊಳ್ಳುತ್ತಿದ್ದರು, ಅದಕ್ಕೆ ನಾನೇ ಸ್ಟೇ ತಂದಿದ್ದೆ. ನಮ್ಮ ಒತ್ತಾಯ ಪಾರದರ್ಶಕ ತನಿಖೆ ಆಗಬೇಕು ಎಂಬುದು ಅಷ್ಟೇ. ಈ ಸರ್ಕಾರ ಅಧಿಕಾರವನ್ನ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅಂತ ರಾಜ್ಯಪಾಲರಿಗೂ ದೂರು ಕೊಡ್ತೀವಿ ಎಂದು ಹೇಳಿದರು.
ಎಸ್ಐಟಿ ತನಿಖೆಯಿಂದ ಸಂತ್ರಸ್ತರಾದ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ(CBI) ನೀಡಬೇಕು. ಸಿಬಿಐಗೆ ನೀಡಲು ಸಾಧ್ಯವಾಗದೇ ಇದ್ದರೆ ನ್ಯಾಯಾಂಗ ತನಿಖೆ ನಡೆಸಬೇಕು. ಈ ತನಿಖೆ ಪೂರ್ಣಗೊಳ್ಳುವವರೆಗೂ ಡಿಕೆಶಿಯನ್ನು ಕ್ಯಾಬಿನೆಟ್ನಿಂದ ವಜಾ ಮಾಡಬೇಕು. ಈ ಪ್ರಕರಣವನ್ನು ನಾವು ಸುಲಭಕ್ಕೆ ಬಿಡುವುದಿಲ್ಲ. ತಪ್ಪು ಮಾಡಿರುವವರು ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದರು.