ಬೆಂಗಳೂರು,ಮೇ07(DaijiworldNews/AZM) : ರಾಜ್ಯದ ಅತಿಥಿ ಉಪನ್ಯಾಸಕರಿಗೆ ಈಗಿರುವ ಗೌರವಧನದಲ್ಲಿ ಮಾಸಿಕ 5000 ಸಾವಿರ ರೂ. ಹೆಚ್ಚಳ ಮಾಡಲು ಹಾಗೂ ಸದ್ಯದ 5,100 ಉಪನ್ಯಾಸಕ ಹುದ್ದೆಗಳ ನೇರ ನೇಮಕಾತಿಯಲ್ಲಿ ಶೇ. 50 ರಷ್ಟು ಹುದ್ದೆಗಳನ್ನು ಅರ್ಹತೆ ಮಾನದಂಡದಲ್ಲಿ ಅತಿಥಿ ಉಪನ್ಯಾಸಕರಿಗೆ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಈ ಕುರಿತು ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರಾದ ಜಿ.ಟಿ.ದೇವೇಗೌಡ, ಪ್ರಸ್ತುತ ಅತಿಥಿ ಉಪನ್ಯಾಸಕರಿಗೆ ಮಾಸಿಕ 11,500 ರೂ. ಗೌರವಧನ ಹಾಗೂ ಎನ್ಇಟಿ ಪಾಸಾದವರಿಗೆ 13,500 ರೂ. ಗೌರವಧನ ನೀಡಲಾಗುತ್ತಿದೆ. ಆದರೆ ಇದೀಗ ಈ ಶೈಕ್ಷಣಿಕ ವರ್ಷದಿಂದ ಅನ್ವಯವಾಗುವಂತೆ ಗೌರವಧನವನ್ನು 5000 ರೂ. ಹೆಚ್ಚಳ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಖಾಲಿ ಇರುವ 1,600 ಉಪನ್ಯಾಸಕ ಹುದ್ದೆಗಳ ಜೊತೆಗೆ, ಹೊಸದಾಗಿ 3,500 ಹುದ್ದೆಗಳನ್ನು ಸೃಷ್ಠಿಸಿ 5,100 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 396 ಪ್ರಾಂಶುಪಾಲರ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು. ಹಾಗೂ 2009 ರಿಂದಲೂ ಈ ಹುದ್ದೆಗಳು ಖಾಲಿ ಇವೆ. ಜೊತೆಗೆ ಅನುದಾನಿತ ಖಾಸಗಿ ಕಾಲೇಜುಗಳಲ್ಲಿನ ಪ್ರಾಂಶುಪಾಲ ಹುದ್ದೆಗಳನ್ನು ಭರ್ತಿ ಮಾಡುವ ಪ್ರಸ್ತಾವಕ್ಕೆ ಹಣಕಾಸು ಇಲಾಖೆ ಸಮ್ಮತಿ ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.