ಶಿವಮೊಗ್ಗ, ಮೇ.8(DaijiworldNews/AK): ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ವಿತರಣೆ ಮಾಡಿದವರು ಕೂಡ ಅಷ್ಟೇ ದೊಡ್ಡ ಅಪರಾಧಿಗಳು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪೆನ್ ಡ್ರೈವ್ ಹಂಚಿದವರನ್ನು ಸರ್ಕಾರ ಗಮನಿಸುತ್ತಿಲ್ಲ. ಇಂತಹ ಪ್ರಕರಣವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದು ನಾಚೀಗೇಡು, ಹೇಸಿಗೆಯ ರಾಜಕೀಯ ಎಂದು ವಾಗ್ದಾಳಿ ನಡೆಸಿದರು.
ಡಿಸಿಎಂ ಡಿಕೆಶಿ ಅವರು ದೇವೇಗೌಡರಿಗೆ ನೋವುಂಟು ಮಾಡಬೇಕು ಎನ್ನುವುದು ಇದರ ಹಿಂದೆ ಇದೆ, ಒಕ್ಕಲಿಗ ನಾಯಕತ್ವದ ಪ್ರಶ್ನೆ ಈ ಪ್ರಕರಣದ ಹಿಂದೆ ಇದೆ ಎಂದು ಹೇಳಿದರು.
ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಸಿಎಂ,ಡಿಸಿಎಂ ಮಾರ್ಗದರ್ಶನದಲ್ಲಿ ಈ ತನಿಖೆ ನಡೆಯುತ್ತಿದೆ. ಕೂಡಲೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ. ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ ನಡೆಯುತ್ತಿದೆ. ಈ ಪ್ರಕರಣದ ಹಿಂದೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಇದ್ದಾರೆ ಎಂದು ಆರೋಪಿಸಿದರು.