ಗುರುಗ್ರಾಮ್, ಮೇ.8(DaijiworldNews/AA): ಹರಿಯಾಣದಲ್ಲಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರವನ್ನು ಬೆಂಬಲಿಸುತ್ತಿದ್ದ ಮೂವರು ಪಕ್ಷೇತರ ಶಾಸಕರು ತಮ್ಮ ಬೆಂಬಲ ಹಿಂತೆಗೆದುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದೆ.
ಮೂವರು ಪಕ್ಷೇತರ ಶಾಸಕರು ಬಿಜೆಪಿಗೆ ತಮ್ಮ ಬೆಂಬಲ ಹಿಂತೆಗೆದುಕೊಂಡ ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಮತ್ತು ಹೊಸ ಚುನಾವಣೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ.
ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಮಂಗಳವಾರ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದ್ದಾರೆ. ಬಳಿಕ ಕಾಂಗ್ರೆಸ್ಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಇನ್ನು ಸಿಎಂ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರವು ಸದನದಲ್ಲಿ ಕೇವಲ 43 ಶಾಸಕರ ಬೆಲೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರವು ಸಂಕಷ್ಟಕ್ಕೆ ಸಿಲುಕಿದೆ.