ಹಿಮಾಚಲ ಪ್ರದೇಶ, ಮೇ9 (DaijiworldNews/AA): ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎನ್ನುವುದು ಹಲವಾರು ಅಭ್ಯರ್ಥಿಗಳ ಕನಸಾಗಿರುತ್ತದೆ. ಕೆಲವರು ತಮ್ಮ ಕನಸನ್ನು ಒಂದೇ ಒಂದು ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಆದರೆ ಕೆಲವರು ಮಾತ್ರ ಹಲವಾರು ಪ್ರಯತ್ನಗಳ ಬಳಿಕ ಉತ್ತೀರ್ಣರಾಗುತ್ತಾರೆ. ಹೀಗೆ ತನ್ನ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಮುಸ್ಕಾನ್ ಜಿಂದಾಲ್ ಅವರ ಯಶೋಗಾಥೆ ಇದು.
ಮುಸ್ಕಾನ್ ಅವರು ಹಿಮಾಚಲ ಪ್ರದೇಶದ ಸೋಲನ್ ಮೂಲದವರು. ಮುಸ್ಕಾನ್ ಅವರು ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಶಾಲೆಯಲ್ಲಿ, ಕಾಲೇಜಿನಲ್ಲಿ ಟಾಪರ್ ಆಗಿದ್ದ ಅವರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುವುದು ಕನಸಾಗಿತ್ತು. ಮುಸ್ಕಾನ್ ಅವರು 12ನೇ ತರಗತಿಯಲ್ಲಿ ಶೇ.96 ಅಂಕ ಪಡೆದಿದ್ದರು.
ಪಿಯುಸಿ ನಂತರ ಮುಸ್ಕಾನ್ ಅವರು ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ ಎಸ್ಡಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆಯುತ್ತಾರೆ. ಬಳಿಕ ಯುಪಿಎಸ್ ಸಿ ಪರೀಕ್ಷೆ ಬರೆಯಲು ತಯಾರಿ ನಡೆಸಿದ ಅವರು ಪ್ರತಿನಿತ್ಯ 7 ರಿಂದ 8 ಗಂಟೆಗಳ ಕಾಲ ಸ್ವಯಂ ಅಧ್ಯಯನ ಮಾಡಲು ಪ್ರಾರಂಭಿಸುತ್ತಾರೆ.
ಮುಸ್ಕಾನ್ ಅವರು 2019 ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದು 87 ನೇ ರ್ಯಾಂಕ್ ಪಡೆದು 22ನೇ ವಯಸ್ಸಿನಲ್ಲೇ ಉತ್ತೀರ್ಣರಾಗುತ್ತಾರೆ. ಈ ಮೂಲಕ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ.