ಮಂಡ್ಯ, ಮೇ.12(DaijiworldNews/AA): ಕುಮಾರಸ್ವಾಮಿ ಏನು ಸಾಚ ಅಲ್ಲ. ರೇವಣ್ಣನಂತೆ ಕುಮಾರಸ್ವಾಮಿ ಜೈಲಿಗೆ ಹೋಗುವ ಸಮಯ ಹತ್ತಿರ ಬಂದಿದೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯ ಮಾಡಿರುವ ಬಗ್ಗೆ ಕೇಳಿದ್ದೇವೆ. ಅವರ ಆಪ್ತರೆ ಹಲವಾರು ಬಾರಿ ಹೇಳಿದ್ದಾರೆ. ರಾಧಿಕಾ ಅವರನ್ನ ಪತ್ನಿ ರೀತಿ ಕಾಣುತ್ತಿದ್ದಾರಾ? ಪೆನ್ಡ್ರೈವ್ ಪ್ರಕರಣ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಸಂತ್ರಸ್ತರು ಧೈರ್ಯ ಮಾಡಲಿದ್ದಾರೆ. ಯಾರಾದರೂ ದೂರು ಕೊಟ್ಟರೆ ಸರ್ಕಾರ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಮಗಳ ವಯಸ್ಸಿನವರನ್ನ ಪುಸಲಾಯಿಸಿ ಮಗಳು ಹುಟ್ಟಿದ ಬಳಿಕ ರಸ್ತೆಯಲ್ಲಿ ಬಿಟ್ಟಿದ್ದಾರೆ. ಕುಮಾರಸ್ವಾಮಿ ನೀಚ ಕೆಲಸ ಮಾಡಿದ್ದಾರೆ. ಸಿಎಂ ಆಗಿದ್ದವರು ಇಂತಹ ನೀಚ ಕೆಲಸ ಮಾಡುತ್ತಾರಾ? ಅವರು ಬರೀ ಬ್ಲಾಕ್ ಮೇಲ್, ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ. ಇನ್ನೊಬ್ಬರನ್ನು ಮುಳುಗಿಸಿದ್ದೆ ಕುಮಾರಸ್ವಾಮಿ ಅವರ ಸಾಧನೆಯಾಗಿದೆ. ಇವರ ಮನೆ ಹೆಣ್ಣು ಮಕ್ಕಳು ಮರ್ಯಾದೆ ರಸ್ತೆಯಲ್ಲಿ ಹರಾಜಾಗಿದ್ದರೆ ಪ್ರತಿಭಟನೆ ಮಾಡ್ತಿದ್ರಾ? ಅವರ ಸ್ವಂತಕ್ಕೆ ಬೇಕಾಗಿರೋದನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.