ಬೆಂಗಳೂರು, ಮೇ 13 (DaijiworldNews/ AK): ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರಿಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಚ್.ಡಿ ರೇವಣ್ಣವನ್ನು ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ರೇವಣ್ಣ ಸೂಚನೆ ಮೇರೆಗೆ ಅಪಹರಣವಾಗಿದೆ ಎಂಬುದಕ್ಕೆ ಸಾಕ್ಷ್ಯಾಧಾರ ಹಾಜರುಪಡಿಸಿಲ್ಲ. ರಿಮಾಂಡ್ ಅರ್ಜಿ ಸಲ್ಲಿಕೆ ವೇಳೆ ಹೇಳಿಕೆ ದಾಖಲಿಸಿದ ಪ್ರಸ್ತಾಪವಿಲ್ಲ. ಸಿಆರ್ಪಿಸಿ 161 ಅಡಿ ಹೇಳಿಕೆ ದಾಖಲಿಸಿದ ಪ್ರಸ್ತಾಪವಿಲ್ಲ ಎಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖವಾಗಿದೆ.
ಜಾಮೀನು ಸಿಕ್ಕರೂ ಸಹ ರೇವಣ್ಣ ಇಂದು ರಾತ್ರಿ ಜೈಲಿನಲ್ಲೇ ಕಳೆಯಬೇಕಾಗಿದೆ. ಈಗಾಗಲೇ ಸಮಯ ಆಗಿದ್ದರಿಂದ ಕೋರ್ಟ್ ಪ್ರಕ್ರಿಯೆಗಳು ನಾಳೆಗೆ ಮುಗಿಯಲಿವೆ. ಹೀಗಾಗಿ ರೇವಣ್ಣ ನಾಳೆ(ಮೇ 14) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಇಬ್ಬರ ಶ್ಯೂರಿಟಿ, 5 ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಸೂಚನೆ ನೀಡಿದೆ. ಸಾಕ್ಷ್ಯಾಧಾರ ನಾಶಪಡಿಸಬಾರದು .ಎಸ್ಐಟಿ ತನಿಖೆಗೆ ಸಹಕರಿಸಬೇಕು ಮಂಡ್ಯ ಜಿಲ್ಲೆಯ ಕೆ.ಆರ್.ನಗರ ತಾಲೂಕು ಪ್ರವೇಶಿಸುವಂತಿಲ್ಲ ಎಂದು ಕೋರ್ಟ್ ಷರತ್ತು ಬದ್ದು ಜಾಮೀನು ಮಂಜೂರು ಮಾಡಿದೆ.
ಎಸ್ಐಟಿ ಬಂಧನದ ಬಳಿಕ ಹೆಚ್.ಡಿ ರೇವಣ್ಣ ಅವರು ಜಾಮೀನಿಗಾಗಿ ಜನಪ್ರತಿನಿಧಿಗಳ ನ್ಯಾಯಾಲಯ ಮೊರೆ ಹೋಗಿದ್ದರು. ರೇವಣ್ಣ ಪರ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದರು. ಇನ್ನು ಎಸ್ಐಟಿ ಪರ ಎಸ್ಎಸ್ಪಿ ಜಾಯ್ನಾ ಕೊಥಾರಿ ಅವರು ವಾದ ಮಂಡಿಸಿದರು.ಸಂತ್ರಸ್ತೆ ಅಪಹರಣಕ್ಕೆ ಸಂಬಂಧಪಟ್ಟಂತೆ ಮೇ 2ರ ತಡರಾತ್ರಿ ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು. ಹೀಗಾಗಿ ಎಸ್ಐಟಿ ರೇವಣ್ಣ ಅವರನ್ನು ಬಂಧಿಸಿದ್ದರು.