ಬೆಂಗಳೂರು, ಮೇ.14(DaijiworldNews/AA): ಕೋರ್ಟ್ ಮೂಲಕ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್ಪೋರ್ಟ್ ರದ್ದತಿಗೆ ಎಸ್ಐಟಿ ಚಿಂತನೆ ನಡೆಸಿದೆ.
ಕೇಂದ್ರ ಸರ್ಕಾರ ನೀಡಿರುವ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ರದ್ದು ಮಾಡಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ದೇಶಕ್ಕೆ ಹಿಂತಿರುಗುವಂತೆ ಸಹಕಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಎಸ್ಐಟಿ ಅಧಿಕಾರಿಗಳು ಕೋರ್ಟ್ ಮೂಲಕ ಆರೋಪಿಗೆ ನೀಡಿರುವ ರಾಜತಾಂತ್ರಿಕ ಪಾಸ್ಪೋರ್ಟ್ ಮತ್ತು ಸಾಮಾನ್ಯ ಪಾಸ್ಪೋರ್ಟ್ ರದ್ದುಗೊಳಿಸಲು ಮುಂದಾಗಿದ್ದಾರೆ.
ಇನ್ನು ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ಲುಕ್ಔಟ್ ನೋಟಿಸ್, ಬ್ಲೂಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಪ್ರಜ್ವಲ್ ಈಗಾಗಲೇ ಭಾರತಕ್ಕೆ ಹಿಂತಿರುಗಲು 2-3 ಬಾರಿ ವಿಮಾನ ಟಿಕೆಟ್ ಬುಕ್ ಮಾಡಿ ರದ್ದುಗೊಳಿಸಿದ್ದಾರೆ. ಇನ್ನು ಕೋರ್ಟ್ ಮೂಲಕ ಪ್ರಜ್ವಲ್ನ ಪಾಸ್ಪೋರ್ಟ್ ಅನ್ನು ರದ್ದು ಮಾಡುವಂತೆ ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಲು ಎಸ್ಐಟಿ ಚಿಂತನೆ ನಡೆಸಿದೆ.