ದೆಹಲಿ, ಮೇ.14(DaijiworldNews/AA): ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಆರ್ಎಸ್ ನಾಯಕಿ ಕೆ.ಕವಿತಾರ ನ್ಯಾಯಾಂಗ ಬಂಧನವನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಮೇ 20ರವರೆಗೆ ಮುಂದೂಡಿದೆ.
ದೆಹಲಿ ಮದ್ಯದ ಅಬಕಾರಿ ನೀತಿ 2021-22ಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ 6ನೇ ಪೂರಕ ಆರೋಪಪಟ್ಟಿಯನ್ನು ಸಲ್ಲಿಸಿತ್ತು. ಇದೀಗ ಈ 6ನೇ ಪೂರಕ ಆರೋಪಪಟ್ಟಿಯನ್ನು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.
ಕವಿತಾ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಮತ್ತು ಸಾಕ್ಷ್ಯವನ್ನು ಹಾಳು ಮಾಡಲು ಪ್ರಯತ್ನ ಮಾಡಬಹುದು ಎಂಬ ಕಾರಣಕ್ಕೆ ಅವರಿಗೆ ಮಧ್ಯಂತರ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆ ಇಂದು ಕವಿತಾ ಅವರನ್ನು ಕೋರ್ಟ್ ಗೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಅವರ ಕಸ್ಟಡಿಯನ್ನು ವಿಸ್ತರಿಸಿ ಆದೇಶಿಸಿದೆ.