ನವದೆಹಲಿ,ಮೇ 7(Daijiworld News/MSP): ಶಸ್ತ್ರಸಜ್ಜಿತ ಕಡಲ್ಗಳ್ಳರ ತಂಡವೊಂದು ಸರಕು ಸಾಗಾಟ ಮಾಡುತ್ತಿದ್ದ ಹಡಗಿನ ಮೇಲೆ ದಾಳಿ ನಡೆಸಿ, ಭಾರತ ಮೂಲದ ಐವರು ನಾವಿಕರನ್ನು ಅಪಹರಣ ಮಾಡಿರುವ ಘಟನೆ ನೈಜಿರಿಯಾದಲ್ಲಿ ನಡೆದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಅಪಹರಣಕ್ಕೊಳಗಾದ ಭಾರತೀಯ ನಾವಿಕರ ಸುರಕ್ಷಿತ ಬಿಡುಗಡೆ ಕ್ರಮ ಕೈಗೊಳ್ಳುವಂತೆ ನೈಜಿರಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಕಡಲ್ಗಳ್ಳರ ವಶದಲ್ಲಿರುವ ಭಾರತೀಯ ನಾವಿಕರ ಬಿಡುಗಡೆಗಾಗಿ ಭಾರತ ಸರ್ಕಾರ ನೈಜಿರಿಯಾ ಸರ್ಕಾರದೊಂದಿಗೆ ಚರ್ಚೆ ನಡೆಸಿದೆ ಎಂದು ಸುಷ್ಮಾ ಮಾಹಿತಿ ನೀಡಿದ್ದಾರೆ.
ಈ ಹಿಂದೆಯೂ ನೈಜಿರಿಯಾ ಭಾಗದಲ್ಲಿ ಕಡಲ್ಗಳ್ಳರ ತಂಡ ಭಾರತೀಯರನ್ನು ಅಪಹರಣ ಮಾಡಿರುವ ಘಟನೆ ನಡೆದಿತ್ತು.