ಬೆಂಗಳೂರು, ಮೇ. 14(DaijiworldNews/AK): ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದು ಒಂದು ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರವು ತನ್ನ ದುರಾಡಳಿತದ ಮೂಲಕ ಶಿಕ್ಷಣ ಕ್ಷೇತ್ರವನ್ನು ಹಾಳುಗಡೆವಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣ ವ್ಯವಸ್ಥೆಯಡಿ ರಾಜ್ಯ ಪಠ್ಯಕ್ರಮದಲ್ಲಿ 1 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 9 ಲಕ್ಷದಷ್ಟು ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದಾರೆ. ಕರ್ನಾಟಕ ಸರಕಾರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಇಲಾಖೆಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು. 1 ಕೋಟಿ ಮಕ್ಕಳ ಭವಿಷ್ಯವನ್ನು ಅತಂತ್ರಕ್ಕೆ ತಳ್ಳುವ ಕೆಲಸ ಮಾಡಿದ್ದಾರೆ ಎಂದು ದೂರಿದರು.
10ನೇ ತರಗತಿ ಪರೀಕ್ಷೆ ಬರೆದ 9 ಲಕ್ಷದಷ್ಟು ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕದಲ್ಲಿದ್ದಾರೆ. ಕೆಎಸ್ಇಎಪಿ ಮೂಲಕ ಪರೀಕ್ಷೆ ನಡೆಸಿದ್ದಾರೆ. ಯಶಸ್ವಿ ಪರೀಕ್ಷೆ ನಡೆಸಿದ್ದಾಗಿ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಅತ್ಯಂತ ಕೆಟ್ಟ ಪರೀಕ್ಷೆ ನಡೆದಿದ್ದರೆ ಅದು ಮಧು ಬಂಗಾರಪ್ಪ ಅವರ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂದು ಅವರು ವಿಷಾದದಿಂದ ತಿಳಿಸಿದರು.ದಿಕ್ಕು ದೆಸೆಯಿಲ್ಲದ ಶಿಕ್ಷಣವನ್ನು ನಿರ್ಮಿಸಿದ್ದಾರೆ ಎಂದು ಟೀಕಿಸಿದರು.
ಸೂತ್ರದ ಗೊಂಬೆಯಾಗಿದ್ದ ಶಿಕ್ಷಣ ಸಚಿವರು:
ಪಠ್ಯಪುಸ್ತಕದಲ್ಲಿನ ಪಾಠಗಳನ್ನು ಕಿತ್ತು ಹಾಕುವುದಾಗಿ ಹೇಳುವ ಮೂಲಕ ಈ ಸರಕಾರ ಕಾರ್ಯಾರಂಭ ಮಾಡಿದೆ. ಶಿಕ್ಷಣ, ಪಠ್ಯದ ವಿಚಾರ ಶಿಕ್ಷಣ ತಜ್ಞರ ಮಟ್ಟದಲ್ಲಿ, ಇಲಾಖೆ ಮಟ್ಟದಲ್ಲಿ ನಿರ್ಧಾರವಾಗುತ್ತಿತ್ತು. ಆದರೆ, ಕಳೆದ ವರ್ಷ ಅದು ಕ್ಯಾಬಿನೆಟ್ನಲ್ಲಿ ನಿರ್ಧಾರವಾಗಿದೆ. ಇವರು ಕನ್ನಡದ 10 ಪಾಠ, ಸಮಾಜ ವಿಜ್ಞಾನದ 10 ಪಾಠಗಳನ್ನು ತೆಗೆದುಹಾಕಿ ಮೊಟ್ಟ ಮೊದಲ ಬಾರಿಗೆ ರಾಜಕೀಯಕರಣಗೊಳಿಸುವ ಕಾರ್ಯಕ್ಕೆ ಈಗಿನ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಕೈ ಹಾಕಿದ್ದರು. ಶಿಕ್ಷಣ ಸಚಿವರು ಸೂತ್ರದ ಗೊಂಬೆಯಾಗಿದ್ದರು ಎಂದು ಅರುಣ್ ಶಹಾಪೂರ ಅವರು ವಿವರಿಸಿದರು.