ಬೆಂಗಳೂರು,ಮೇ 7(Daijiworld News/MSP):ಸ್ಯಾಂಡಲ್ ವುಡ್ ನ ನಟಿ ಹಾಗೂ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿ ಘನತೆಗೆ ಕುಂದು ತಂದ ಆರೋಪದಡಿ ನವೀನ್ ಸಾಗರ್ ಎಂಬುವವರ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ರಮ್ಯಾ ಪರವಾಗಿ ವಕೀಲೆ ಎಚ್. ವಿ ಭವ್ಯಾ ಎಂಬವರು ದೂರು ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅವರು ನಟಿಸಿರುವ ಸಿನಿಮಾದ ಫೋಟೋ ಬಳಸಿ ವಿಕೃತವಾಗಿ ಬಿಂಬಿಸಿ ಅಶ್ಲೀಲ ಪದಗಳನ್ನು ಬಳಸಿ ತೇಜೋವಧೆಗೆ ಯತ್ನಿಸಿದ್ದಾರೆ. ಮಹಿಳೆಯ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಳಸಿಕೊಂಡು ಘನತೆಗೆ ಧಕ್ಕೆ ತಂದಿರುವ ನವೀನ್ ಸಾಗರ್ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಎಂದು ದೂರಿನಲ್ಲಿ ಭವ್ಯಾ ಅವರು ತಿಳಿಸಿದ್ದಾರೆ.