ಮಹಾರಾಷ್ಟ್ರ,ಮೇ 7(Daijiworld News/MSP): ಅಂತರ್ಜಾತಿ ವಿವಾಹವಾದರೆಂಬ ಕಾರಣಕ್ಕೆ 2 ತಿಂಗಳ ಗರ್ಭಿಣಿ ಮಗಳು ಹಾಗೂ ಹಾಗೂ ಆಕೆಯ ಪತಿಯನ್ನು ಆಕೆಯ ತಂದೆ ಮತ್ತು ಸೋದರ ಮಾವಂದಿರೇ ಸಜೀವ ದಹನ ಮಾಡಿದ ಅಮಾನುಷ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೃತಪಟ್ಟವಳನ್ನು 19 ವರ್ಷದ ರುಕ್ಮಿಣಿ ರಣ್ಸಿಂಗ್ ಎಂದು ಗುರುತಿಸಲಾಗಿದೆ. ಪತಿ ಮತ್ತು ಆಕೆಯನ್ನು ಬೆಂಕಿಯಿಂದ ಸುಟ್ಟ ಕಾರಣ ಗಂಭೀರ ಗಾಯಗೊಂಡ ರುಕ್ಮಿಣಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಮೃತಪಟ್ಟ ಯುವತಿಯ ಪತಿ ಮಂಗೇಶ್ ರಣ್ಸಿಂಗ್ (23 ವರ್ಷ) ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.
ಮೇ 1ರಂದು ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಪರ್ನೇರ್ ತಾಲೂಕಿನ ನಿಗೋಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವನ್ನಪ್ಪುವ ಮುನ್ನ ರುಕ್ಮಿಣಿ ಈ ಕೃತ್ಯವನ್ನು ತಂದೆ ಹಾಗೂ ಇಬ್ಬರು ಸೋದರ ಮಾವಂದಿರು ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು.
ಅಂತರ್ಜಾತಿ ವಿವಾಹಕ್ಕೆ ಒಪ್ಪದ ಹೆತ್ತವರ ವಿರೋಧವನ್ನು ಲೆಕ್ಕಿಸದೆ ರುಕ್ಮಿಣಿ 6 ತಿಂಗಳ ಹಿಂದೆ ಮಂಗೇಶ್ ರಣ್ಸಿಂಗ್ ಮದುವೆಯಾಗಿದ್ದಳು. ಮಂಗೇಶ್ ಲಾಹೋರ್ ಸಮುದಾಯಕ್ಕೆ ಸೇರಿದರೆ, ರುಕ್ಮಿಣಿ ಪಾಸಿ ಸಮುದಾಯದವಳಾಗಿದ್ದಾರೆ. ವಿವಾಹದ ನಂತರ ಅನೋನ್ಯವಾಗಿ ಜೀವನ ಸಾಗಿಸುತ್ತಿದ್ದ ದಂಪತಿ ಏಪ್ರಿಲ್ 30ರಂದು ಕ್ಲುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ. ಬಳಿಕ ತವರು ಮನೆಗೆ ಬಂದಿದ್ದಾಳೆ. ಆದರೆ ಮೇ 1 ರಂದು ಪತ್ನಿಗೆ ಕರೆ ಮಾಡಿದ ಮಂಗೇಶ್, ಮನೆಗೆ ಬರುವಂತೆ ವಿನಂತಿಸಿದ್ದಾನೆ. ಮಾತ್ರವಲ್ಲದೆ ಪತ್ನಿಯನ್ನು ಕರೆದೊಯ್ಯಲು ಮಾವನ ಮನೆಗೆ ಬಂದಿದ್ದಾರೆ. ರುಕ್ಮಿಣಿಯನ್ನು ಕಳುಹಿಸಿಕೊಡಲು ಒಪ್ಪದೆ ಇರೋದ್ರಿಂದ ಮಂಗೇಶ್ ಹಾಗೂ ರುಕ್ಮಿಣಿ ಕುಟುಂಬಸ್ಥರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಇಬ್ಬರನ್ನೂ ರೂಮಿನಲ್ಲಿ ಬಂಧಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ದಂಪತಿ ಆಸ್ಪತ್ರೆಯಲ್ಲಿ ಇರುವಾಗ ನೀಡಿದ ಹೇಳಿಕೆ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದು, ಸೋದರ ಮಾವಂದಿರಾದ ಸುರೇಂದ್ರ ಭಾರತೀಯ ಮತ್ತು ಘನಶ್ಯಾಮ್ ಸರೋಜ್ ಎಂಬವರನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯ ತಂದೆ ರಾಮ ಭಾರತೀಯ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.