ನವದೆಹಲಿ, ಮೇ 16 (DaijiworldNews/ AK): ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ್ದ ಕೋವ್ಯಾಕ್ಸಿನ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ವರದಿ ಹೊರಬಿದ್ದಿದೆ. ಈ ಲಸಿಕೆ ಪಡೆದ ವರ್ಷದ ಬಳಿಕ ಅನೇಕರಲ್ಲಿ ಅಡ್ಡ ಪರಿಣಾಮ ಕಂಡುಬಂದಿವೆ ಎಂದು ಬನಾರಸ್ ಹಿಂದೂ ವಿವಿ ನಡೆಸಿದ ಅಧ್ಯಯನ ತಿಳಿಸಿದೆ.
ಕೋವಿಡ್ ಲಸಿಕೆಗಳ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚಿಗೆ ವರದಿಯಾಗಿತ್ತು. ಎರಡು ವಾರಗಳ ಹಿಂದಷ್ಟೇ ಕೋವಿಶೀಲ್ಡ್ ಅಡ್ಡಪರಿಣಾಮಗಳ ಬಗ್ಗೆ ವರದಿ ಆಗಿತ್ತು. ಇದೀಗ ಕೋವ್ಯಾಕ್ಸಿನ್ ಅಡ್ಡ ಪರಿಣಾಮ ಬಗ್ಗೆ ವರದಿ ಬಂದಿದೆ. . ಈ ವರದಿ ಪ್ರಕಾರ ಕೋವ್ಯಾಕ್ಸಿನ್ ಪಡೆದ ಹದಿಹರೆಯದವರು ಮತ್ತು ಯುವಕರಲ್ಲಿ ಹೆಚ್ಚು ಅಡ್ಡಪರಿಣಾಮ ಕಂಡುಬಂದಿದೆ.
ಸುಮಾರು 1,024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು,48% ರಷ್ಟು ಮಂದಿ ಶ್ವಾಸಕೋಶದ ಸೋಂಕಿಗೆ ತುತ್ತಾಗಿರೋದು ಕಂಡುಬಂದಿದೆ. ಅಲ್ಲದೇ, ನರ ಸಂಬಂಧಿ ಕಾಯಿಲೆ, ಸ್ನಾಯು ಸೆಳೆತ, ಕೀಲುನೋವು, ಚರ್ಮ ರೋಗಗಳು ಕೂಡ ಕಂಡುಬಂದಿವೆ. 4.6% ರಷ್ಟು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆ ಕೂಡ ಕಂಡುಬಂದಿದೆ. ಇದೆಲ್ಲಾ ಇತರೆ ಲಸಿಕೆಗಳ ಅಡ್ಡಪರಿಣಾಮಗಳಿಗಿಂತ ಭಿನ್ನ ಎನ್ನಲಾಗಿದ್ದು, ಮತ್ತಷ್ಟು ಆಳ ಅಧ್ಯಯನ ಮುಂದುವರೆದಿದೆ.