ಕೋಲ್ಕತ, ಮೇ07(Daijiworld News/SS): ಪ್ರಧಾನಿ ನರೇಂದ್ರ ಮೋದಿಯನ್ನು ರಾವಣ ಹಾಗೂ ದುರ್ಯೋಧನನಿಗೆ ಹೋಲಿಸಿ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮೋದಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷದ ಅಗತ್ಯವಿದೆ ಎಂದು ಹೇಳಿದ್ದಾರೆ.
ಮೇ.06ರಂದು ಪ್ರಧಾನಿ ಮೋದಿ ಅವರು, ಪಶ್ಚಿಮ ಬಂಗಾಳದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದವರನ್ನು ಬಂಧಿಸುವ ಮಮತಾ ಬ್ಯಾನರ್ಜಿ ಸರಕಾರ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ, ನಾನೂ ಜೈ ಶ್ರೀರಾಮ್ ಅನ್ನುತ್ತೇನೆ ಎಂದು ಸವಾಲು ಹಾಕಿದ್ದರು.
ಇದೀಗ ಈ ತಿರುಗೇಟು ನೀಡಿದ ಮಮತಾ ಬ್ಯಾನರ್ಜಿ, ಮೋದಿ ಅವರು ಬಂಗಾಳಕ್ಕೆ ಬಂದು ನನ್ನನ್ನು ದೊಡ್ಡ ಸುಲಿಗೆಕೋರಳು ಎಂದು ಹೇಳುತ್ತಾರೆ. ಅವರ ಕಪಾಳಕ್ಕೆ ಹೊಡೆಯಲು ನಾನು ಬಯಸುತ್ತೇನೆ. ಪ್ರಜಾಪ್ರಭುತ್ವದ ಕಪಾಳಮೋಕ್ಷ ಅವರಿಗೆ ಅಗತ್ಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಬಿಜೆಪಿ ಬಾಬು. ನೀವು ಜೈ ಶ್ರೀರಾಮ್ ಎಂದು ಹೇಳಬಹುದು. ಆದರೆ ರಾಮ ಮಂದಿರ ನಿರ್ಮಿಸಲು ನಿಮ್ಮಿಂದ ಆಗಿಲ್ಲವೇಕೆ…? ಚುನಾವಣೆ ವೇಳೆ ರಾಮಚಂದ್ರ ನಿಮ್ಮ ಪಕ್ಷದ ಏಜೆಂಟ್ ಆಗಿ ಬಿಡುತ್ತಾನೆ. ನೀವು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತೀರಿ. ಮತ್ತೆ ಅದನ್ನು ಇತರರ ಮೇಲೂ ಹೇರಲು ಪ್ರಯತ್ನಿಸುತ್ತಿದ್ದೀರಿ ಎಂದು ದೂರಿದರು.