ಬೆಂಗಳೂರು, ಮೇ. 18(DaijiworldNews/AA): ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಪ್ರಜ್ವಲ್ ರೇವಣ್ಣ ಕಳಂಕ ತಂದಿದ್ದಾರೆ. ಪ್ರಜ್ವಲ್ ತಂದ ಕಳಂಕ ತೊಳೆದುಕೊಳ್ಳುವವರೆಗೆ ದೇವೇಗೌಡ ಕುಟುಂಬ ರಾಜೀನಾಮೆ ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಜೆಡಿಎಸ್ ನಾಯಕರು ಪ್ರಜ್ವಲ್ ಯಾಕೆ ಹೀಗೆ ಮಾಡಿದ ಎಂದು ಹೇಳುತ್ತಿಲ್ಲ. ನಮ್ಮ ಮನೆ ಮಗ ತಪ್ಪು ಮಾಡಿದ್ದಾನೆ. ನಮ್ಮ ಕುಟುಂಬದ ಮೇಲೆ ಈ ಕಳಂಕ ಇದೆ. ಮನೆ ಮಗನಿಗೆ ಏನೂ ಆಗಬಾರದು, ಕುಟುಂಬದ ಖ್ಯಾತಿಯ ಬಗ್ಗೆ ಮಾತ್ರ ಅವರು ಕಾಳಜಿ ವಹಿಸುತ್ತಿದ್ದಾರೆ. ಪ್ರಜ್ವಲ್ಗೆ ಮಾನಸಿಕ ರೋಗ ಇತ್ತು. ಅದಕ್ಕೆ ಚಿಕಿತ್ಸೆ ಕೊಡಿಸುತ್ತೇವೆ ಎಂದು ಅವರ ಮನೆಯವರು ಹೇಳಿದ್ದಾರಾ ಎಂದು ಅವರು ಪ್ರಶ್ನಿಸಿದರು.
ಹೆಚ್ ಡಿ ಡಿ ಕುಟುಂಬದಲ್ಲಿ ಮೇಲ್ಮನೆ, ಕೆಳಮನೆ, ರಾಜ್ಯಸಭೆ ಸದಸ್ಯರುಗಳಿದ್ದಾರೆ. ಅವರೆಲ್ಲಾ ಈ ಕಳಂಕ ಅಳಿಸುವವರೆಗೂ ರಾಜೀನಾಮೆ ಕೊಡುತ್ತೇವೆ ಎಂದು ಯಾಕೆ ಹೇಳುತ್ತಿಲ್ಲ? ಪ್ರಜ್ವಲ್ ಜರ್ಮನಿಗೆ ಹೋಗಿದ್ದಾರೆ. ವಿಚಾರಣೆಗೆ ಕರೆದಾಗ ಬರುತ್ತಾರೆ ಎಂದಿದ್ದರು. ಈಗ ಪ್ರಜ್ವಲ್ ಎಲ್ಲಿದ್ದಾನೆ ಎಂದು ತಿಳಿದಿಲ್ಲ ಎನ್ನುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರವು ಪ್ರಜ್ವಲ್ ನನ್ನು ಬೆಂಗಳೂರಿಗೆ ಕರೆತರಲು ಎಸ್ಐಟಿಗೆ ಸಹಾಯ ಮಾಡಲಿ. ಪ್ರಜ್ವಲ್ ದೇಶದಲ್ಲಿ ಇದ್ದಿದ್ದರೆ ಆತನನ್ನು ಹಿಡಿಯಬಹುದು. ವಿದೇಶದಲ್ಲಿ ಇರುವಾಗ ಕೇಂದ್ರದ ಸಹಕಾರ ಬೇಕು. ಹೀಗಾಗಿ ನಮಗೆ ಕೇಂದ್ರ ಸರ್ಕಾರದ ನೆರವು ಬೇಕಾಗುತ್ತದೆ ಎಂದು ಹೇಳಿದರು.