ಬೆಂಗಳೂರು, ಮೇ. 18(DaijiworldNews/AA): ಪ್ರಜ್ವಲ್ ಪ್ರಕರಣದಲ್ಲಿ ಬಿಜೆಪಿಗೆ ಯಾವುದೇ ಗೊಂದಲವಿಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು ಅದರಲ್ಲಿ ಎರಡು ಮಾತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಹೆಸರು ಕೇಳಿಬರುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪೆನ್ ಡ್ರೈವ್ ಗಳನ್ನು ಹಾದಿ ಬೀದಿಯಲ್ಲಿ ಬಿಸಾಡಿದವರನ್ನು ಶಿಕ್ಷೆಗೊಳಡಿಸಬೇಕು, ಇದರ ಹಿಂದೆ ಯಾರಿದ್ದಾರೆ ಅನ್ನೋದು ತನಿಖೆಯಾಗಬೇಕು ಎಂದು ತಿಳಿಸಿದರು.
ಪ್ರಜ್ವಲ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಹೆಸರು ಕೇಳಿ ಬರುತ್ತಿರುವ ಬಗ್ಗೆ ಮಾತನಾಡಿದ ಅವರು, ಇದರಲ್ಲಿ ಘಟಾನುಘಟಿಗಳ ಹೆಸರು ಕೇಳಿಬರುತ್ತಿರುವುದು ನಿಜ. ಅದೇ ಕಾರಣಕ್ಕೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಬಿಜೆಪಿ ಆಗ್ರಹಿಸುತ್ತಿದೆ. ಅನ್ಯಾಯಕ್ಕೊಳಗಾಗಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವುದು ಎಸ್ಐಟಿಯಿಂದ ಸಾಧ್ಯವಿಲ್ಲ. ಸಿಬಿಐ ತನಿಖೆ ನಡೆಸಿದರೆ ಅವರಿಗೆ ನ್ಯಾಯ ಸಿಗುವ ಜೊತೆಗೆ ಮುಚ್ಚಿಹೋಗುವ ಅಪಾಯದಲ್ಲಿರುವ ಎಲ್ಲಾ ಸಂಗತಿಗಳು ಹೊರಬೀಳಲಿವೆ ಎಂದರು.